ಪೊಲೀಸ್ ಅಧಿಕಾರಿಯೊಂದಿಗೆ ನವಿಲಿನ ಮಧುರ ಬಾಂಧವ್ಯ: ಹೃದಯ ಸ್ಪರ್ಶಿ ವಿಡಿಯೋ ವೈರಲ್ - ಅರ್ವಾಲ್ ಪೊಲೀಸ್ ಠಾಣೆಯ ಮುಖ್ಯಸ್ಥ ಶ್ಯಾಮು ಕನೋಜಿಯಾ
🎬 Watch Now: Feature Video
ಹರ್ದೋಯಿ(ಉತ್ತರ ಪ್ರದೇಶ): ಗೆಳೆತನ ಪ್ರಪಂಚದ ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ಒಂದಾಗಿದೆ. ಇದು ವ್ಯಕ್ತಿಗಳ ಅಥವಾ ಪ್ರಾಣಿಗಳ ನಡುವಿನ ಸಮರ್ಪಿತ ಬಂಧ. ಇಬ್ಬರೂ ಪರಸ್ಪರ ಅಪಾರ ಕಾಳಜಿ ಮತ್ತು ಪ್ರೀತಿಯನ್ನು ಅನುಭವಿಸುತ್ತಾರೆ. ಜೀವನದ ಹಾದಿಯಲ್ಲಿ ನೀವು ಅನೇಕರನ್ನು ಭೇಟಿಯಾಗುತ್ತೀರಿ. ಆದರೆ, ಕೆಲವರು ಮಾತ್ರ ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತಾರೆ.
ಸ್ನೇಹಿತರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ದೇವರು ನಮಗೆ ಕೊಟ್ಟಿದ್ದಾನೆ. ನಮ್ಮ ಹೆತ್ತವರು ಮತ್ತು ಒಡಹುಟ್ಟಿದವರು ನಮ್ಮನ್ನು ಪ್ರೀತಿಸುವುದು ಸಾಮಾನ್ಯ. ಏಕೆಂದರೆ ಅವರು ನಮ್ಮ ಸ್ವಂತ ರಕ್ತ. ಆದರೆ, ಸ್ನೇಹಿತ ಆರಂಭದಲ್ಲಿ ಅಪರಿಚಿತನಾಗಿರುತ್ತಾನೆ ಮತ್ತು ನಂತರ ಇತರ ಎಲ್ಲ ಸಂಬಂಧಗಳಿಗಿಂತ ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳುತ್ತಾನೆ. ಸ್ನೇಹವೆಂದರೆ ಹಾಗೇ. ಯಾವುದೇ ನಿರೀಕ್ಷೆಗಳಿಲ್ಲದ ಶುದ್ಧ ಪ್ರೀತಿಯೇ ಹೊರತು ಬೇರೇನೂ ಅಲ್ಲ.
ಅದು ಮನುಷ್ಯರಾಗಿರಲಿ ಅಥವಾ ಪ್ರಾಣಿಗಳು ಮತ್ತು ಪಕ್ಷಿಗಳಾಗಿರಲಿ, ಎಲ್ಲರೂ ಪ್ರೀತಿಯ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಇದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಉತ್ತಮ ಉದಾಹರಣೆ. ಹೌದು ಅರ್ವಾಲ್ ಪೊಲೀಸ್ ಠಾಣೆಯ ಮುಖ್ಯಸ್ಥ ಶ್ಯಾಮು ಕನೋಜಿಯಾ ಮತ್ತು ನವಿಲು ನಡುವಿನ ಸ್ನೇಹದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ಪೊಲೀಸ್ ಇಲಾಖೆಯ ಚಿತ್ರಣವನ್ನೇ ಬದಲಿಸಿದೆ. ಇಷ್ಟೇ ಅಲ್ಲ, ಕನೋಜಿಯಾ ಕರೆದಾಗಲೆಲ್ಲ ನವಿಲು ಅವರ ಬಳಿಗೆ ಓಡೋಡಿ ಬರುತ್ತದೆ. ಪೊಲೀಸ್ ಸಿಬ್ಬಂದಿ ಮತ್ತು ನವಿಲಿನ ನಡುವಿನ ಮಧುರ ಬಾಂಧವ್ಯಕ್ಕೆ ಜನ ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಠಾಣೆಯ ಮುಖ್ಯಾಧಿಕಾರಿ ಕನೋಜಿಯಾ ನವಿಲನ್ನು ಎಷ್ಟು ಪ್ರೀತಿಸುತ್ತಾರೋ ನವಿಲು ಕೂಡ ಅವರನ್ನು ಅಷ್ಟೇ ಪ್ರೀತಿಸುತ್ತದೆ. ಈ ನವಿಲು ಅವರ ಅಂಗೈಯಲ್ಲಿ ಇಟ್ಟಿರುವ ಅನ್ನ ಅಥವಾ ಇತರ ತಿನಿಸು ತಿನ್ನುವವರೆಗೆ ಠಾಣೆಯ ಸುತ್ತಲೂ ಸುಳಿದಾಡುತ್ತಲೇ ಇರುತ್ತದೆ. ಕನೋಜಿಯಾ ಅವರು ನೋಡುವವರೆಗೆ ಠಾಣೆಯ ಗೋಡೆಯ ಮೇಲೆ ಕುಳಿತು ಗಮನಿಸುತ್ತಿರುತ್ತದೆ. ಅವರು ಕರೆದ ತಕ್ಷಣ ಓಡಿ ಬಂದು ಅವರ ಬಳಿ ಬಂದು ನಿಲ್ಲುತ್ತದೆ. ಕನೋಜಿಯಾ ಕೂಡ ನವಿಲಿಗೆ ಏನಾದರೂ ತಿನ್ನಿಸುವ ತನಕ ಸುಮ್ಮನಿರುವುದಿಲ್ಲ.
ಅವರು ನೆಲದ ಮೇಲೆ ಕುಳಿತು ನವಿಲನ್ನು ಕರೆದು ಅಂಗೈಯಲ್ಲಿ ಇಟ್ಟಿದ್ದ ತಿಂಡಿ ತಿನ್ನಿಸುತ್ತಿದ್ದಾರೆ. ನವಿಲು ನಿರ್ಭಯವಾಗಿ ತಿಂಡಿ ತಿನ್ನುತ್ತಿರುವುದು ವಿಡಿಯೋದಲ್ಲಿದೆ. ಪ್ರತಿ ದಿನ ಈ ನವಿಲು ಠಾಣೆಗೆ ಬಂದು ಠಾಣೆಯ ಮುಖ್ಯಾಧಿಕಾರಿಯ ಕೈಯಿಂದ ಆಹಾರ ತಿನ್ನುತ್ತದೆ ಎನ್ನುತ್ತಾರೆ ಸ್ಥಳೀಯರು. ಟ್ವಿಟರ್‌ನಲ್ಲಿ ಬಳಕೆದಾರರೊಬ್ಬರು ಇದು ಹೃದಯಸ್ಪರ್ಶಿ ವಿಡಿಯೋ ಎಂದು ಕಮೆಂಟ್ ಮಾಡಿದ್ದಾರೆ. ಇದು ಬಹಳ ಅಪರೂಪ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: 'ಕಲ್ಯಾಣಿ' ಮತ್ತು ಗೆಳೆತನ... ಸ್ವಚ್ಛ-ಸುಂದರ-ಹಸಿರು ಈ ಫ್ರೆಂಡ್ಶಿಫ್!