'ಕರೆಂಟ್ ಬಿಲ್ ಕಟ್ಟೋದಿಲ್ಲಾ ರೀ ನಾವ್, ಕಾಂಗ್ರೆಸ್ ಸರ್ಕಾರ ಹೇಳೈತಿ ನಮ್ಗೆ'.. - ವಿದ್ಯುತ್ ಬಿಲ್
🎬 Watch Now: Feature Video

ಬೆಳಗಾವಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ವಿದ್ಯುತ್ ಬಿಲ್ ಪಾವತಿಗೆ ಜನರು ಹಿಂದೇಟು ಹಾಕುತ್ತಿರುವ ಘಟನೆಗಳು ರಾಜ್ಯದ ಅಲ್ಲಲ್ಲಿ ಪ್ರತಿದಿನ ನಡೆಯುತ್ತಿವೆ. ಭರವಸೆಗಳಲ್ಲಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ ಹಿನ್ನೆಲೆ ಜನರು ಈಗಲೇ ವಿದ್ಯುತ್ ಬಿಲ್ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗ ಅಂತಹದೇ ಘಟನೆ ಕಿತ್ತೂರು ತಾಲೂಕಿನ ವೀರಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ವಿದ್ಯುತ್ ಬಿಲ್ ಕೇಳಲು ಹೋದ ಹೆಸ್ಕಾಂ ಸಿಬ್ಬಂದಿಯೊಂದಿಗೆ ಗ್ರಾಮಸ್ಥರು ಮಾತಿನ ಚಕಮಕಿ ನಡೆಸಿದ್ದಾರೆ. 'ಸರ್ಕಾರ ಅಸ್ತಿತ್ವಕ್ಕೆ ಬಂದ 24 ಗಂಟೆಯೊಳಗೆ 200 ಯುನಿಟ್ ವಿದ್ಯುತ್ ಉಚಿತ ಎಂದು ಕಾಂಗ್ರೆಸ್ ಹೇಳಿದೆ. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೈತಿ, ಕರೆಂಟ್ ಬಿಲ್ ಕಟ್ಟೋದಿಲ್ಲಾ ರೀ ನಾವ್, ಕಾಂಗ್ರೆಸ್ ಸರ್ಕಾರ ಹೇಳೈತಿ ನಮ್ಗೆ' ಅಂತಿದ್ದಾರೆ. ಸರ್ಕಾರದ ಆದೇಶ ಇನ್ನೂ ಬಂದಿಲ್ಲ, ಅಲ್ಲಿಯವರೆಗೆ ಬಿಲ್ ಪಾವತಿಸಿ ಎಂದು ಹೆಸ್ಕಾಂ ಸಿಬ್ಬಂದಿ ಎಷ್ಟೇ ಹೇಳಿದರೂ ಜನರು ಮಾತ್ರ ಕೇಳುತ್ತಿಲ್ಲ.
ವಿದ್ಯುತ್ ಬಿಲ್ ಪಾವತಿಸದಿದ್ದರೆ ನಿಮ್ಮ ಮೀಟರ್ ಬಂದ್ ಮಾಡುತ್ತೇವೆ ಎಂದು ಎಚ್ಚರಿಸಿದರೂ ಕೂಡ ಡೋಂಟ್ ಕೇರ್ ಎಂದಿರುವ ಗ್ರಾಮಸ್ಥರು, ಮೀಟರ್ ಬಂದ್ ಮಾಡಿ, ಎಲ್ಲವನ್ನೂ ಕಾಂಗ್ರೆಸ್ ಸರ್ಕಾರ ನೋಡಿಕೊಳ್ಳುತ್ತದೆ ಎನ್ನುವ ಮೂಲಕ ಹೆಸ್ಕಾಂ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಗ್ರಾಹಕರು ಹಾಗೂ ಹೆಸ್ಕಾಂ ಸಿಬ್ಬಂದಿಯ ಸಂಭಾಷಣೆ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಅಧಿಕೃತ ಆದೇಶ ಹೊರಬಿದ್ದ ಬಳಿಕ ಯೋಜನೆ ಜಾರಿಗೆ.. ನೂತನ ಸರ್ಕಾರವು ತಾನು ನೀಡಿದ್ದ ಐದು ಭರವಸೆಗಳಿಗೆ ಸದ್ಯಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ. ಆದ್ರೆ ಅಧಿಕೃತ ಆದೇಶ ಹೊರಡಿಸಿದ ಬಳಿಕವಷ್ಟೇ ಜನರಿಗೆ ಉಚಿತ ಕೊಡುಗೆಗಳು ಸಿಗಲಿವೆ.
ಇದನ್ನೂ ಓದಿ: 'ಕರೆಂಟ್ ಬಿಲ್ ನಾವು ಕಟ್ಟಲ್ಲ'.. ಬೆಸ್ಕಾಂ ಸಿಬ್ಬಂದಿಯೊಂದಿಗೆ ಮಹಿಳೆ ಮಾತಿನ ಚಕಮಕಿ