ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ವಾಟಾಳ್ ತಮಟೆ ಚಳವಳಿ - Vatal Nagaraj protest
🎬 Watch Now: Feature Video
Published : Sep 3, 2023, 7:56 PM IST
ಮೈಸೂರು : ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಮಟೆ ಚಳವಳಿ ನಡೆಸಿದರು. ತಮಿಳುನಾಡಿಗೆ ಕಾವೇರಿ ನೀರು ಬಿಡದಂತೆ ಆಗ್ರಹಿಸಿ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ತಮಿಳುನಾಡು ಸರ್ಕಾರ ಉದ್ದೇಶಪೂರ್ವಕವಾಗಿ ಉದ್ಧಟತನ ತೋರುತ್ತಿದೆ. ತಮಿಳುನಾಡು ಮಾಜಿ ಸಿಎಂಗಳಾದ ಜಯಲಲಿತಾ, ಕರುಣಾನಿಧಿ, ಪನ್ನೀರ್ ಸೆಲ್ವಂ ಬಳಿಕ ಇದೀಗ ಮುಖ್ಯಮಂತ್ರಿ ಸ್ಟಾಲಿನ್ ಅವರು ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ಮಾತುಕತೆ ಮೂಲಕ ತಮಿಳುನಾಡು ಸಿಎಂ ಸ್ಟಾಲಿನ್ ಅವರು ಕಾವೇರಿ ನೀರನ್ನು ಕೇಳಬೇಕಿತ್ತು. ಆದರೆ ಅವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಬೆದರಿಕೆ ಹಾಕಿರುವುದು ಸರಿಯಲ್ಲ. ಮೊದಲು ಸ್ಟಾಲಿನ್ ಅವರು ರಾಜ್ಯದಲ್ಲಿ ಎಷ್ಟು ಬೆಳೆ ಬೆಳೆಯುತ್ತಿದ್ದಾರೆ, ಅಲ್ಲಿನ ಜಲಾಶಯಗಳಲ್ಲಿ ಎಷ್ಟು ನೀರಿದೆ ಎಂಬ ಬಗ್ಗೆ ಮಾಹಿತಿ ನೀಡಲಿ. ಅಲ್ಲಿ ಅವರು ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ನಾವು ಇಲ್ಲಿ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದೇವೆ ಎಂದರು.
ಕಾವೇರಿ ನೀರು ವಿವಾದ ಸಂಬಂಧ ಇನ್ನೂ ಸಿಎಂ ಸಿದ್ದರಾಮಯ್ಯ ಅವರನ್ನು ನಾನು ಭೇಟಿ ಮಾಡಿಲ್ಲ. ಸಿದ್ದರಾಮಯ್ಯ ಅವರು ಪ್ರವಾಸದಲ್ಲಿರುವುದರಿಂದ ಭೇಟಿ ಮಾಡಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಭೇಟಿ ಮಾಡುತ್ತೇನೆ. ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಇದೇ ವೇಳೆ ವಾಟಾಳ್ ಎಚ್ಚರಿಕೆ ರವಾನಿಸಿದರು.
ಇದನ್ನೂ ಓದಿ : Cauvery water: ರಸ್ತೆಗಿಳಿದ ಕನ್ನಡಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರಿಂದ ಅಪ್ಪಿಕೊ ಚಳವಳಿ