ಧಾರವಾಡ -ಬೆಂಗಳೂರು ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ.. ಜೂನ್ 26ರಂದು ಸಿಗಲಿದೆ ಅಧಿಕೃತ ಚಾಲನೆ - ನೈರುತ್ಯ ರೇಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್
🎬 Watch Now: Feature Video
ಧಾರವಾಡ: ಯಶಸ್ವಿ ಪ್ರಾಯೋಗಿಕ ಸಂಚಾರ ನಡೆಸಿದ ಬೆಂಗಳೂರು-ಧಾರವಾಡ ನಡುವಣ ವಂದೇ ಭಾರತ್ ರೈಲಿಗೆ ಜೂನ್ 26 ರಂದು ಅಧಿಕೃತ ಚಾಲನೆ ಸಿಗಲಿದೆ. ಹೌದು ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ವಂದೇ ಭಾರತ್ ಬೆಂಗಳೂರು-ಧಾರವಾಡ ಮಧ್ಯೆಯ ರೈಲಿಗೆ ಪ್ರಧಾನಿ ನರೇಂದ್ರ ಮೋದಿಯವರಿಂದ ಹಸಿರು ನಿಶಾನೆ ಸಿಗಲಿದ್ದು, ಜೂನ್ 26 ರಿಂದ ಅಧಿಕೃತ ಓಡಾಟ ಆರಂಭಿಸಲಿದೆ.
ನಿನ್ನೆ ರೈಲು ( ಸೋಮವಾರ) ಪ್ರಾಯೋಗಿಕ ಸಂಚಾರ ನಡೆಸಿದ ನಂತರ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ನೈರುತ್ಯ ರೇಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್, ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿದೆ. ರೈಲು ಬೆಳಗ್ಗೆ 5:45 ಕ್ಕೆ ಬೆಂಗಳೂರು ಬಿಟ್ಟಿದ್ದು, ರೈಲಿನಲ್ಲಿ ತಾಂತ್ರಿಕ ತಂಡ ಹಾಗೂ ಅಧಿಕಾರಿಗಳಿದ್ದರು. ಆ ಅಧಿಕಾರಿಗಳು ಎಲ್ಲಾ ಬಗೆಯ ಪರೀಕ್ಷೆಗಳು ಯಶಸ್ವಿಯಾಗಿದೆ ಎಂದರು. ಇತ್ತೀಚಿಗಷ್ಟೇ ಧಾರವಾಡ-ಬೆಂಗಳೂರು ಮಧ್ಯೆ ಎಲೆಕ್ಟ್ರಿಕಲ್ ಲೈನ್ ಎಳೆಯಲಾಗಿದ್ದು, ಇದೇ ವೇಳೆ ಇದರ ಪರೀಕ್ಷೆಯನ್ನು ಮಾಡಲಾಗಿದೆ. ಎಲ್ಲವೂ ಯಶಸ್ವಿಯಾಗಿ ನಡೆದಿದೆ. ಇದರಿಂದಾಗಿ ನಮ್ಮ ಸಿಬ್ಬಂದಿ ಖುಷಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
40 ನಿಮಿಷ ಮುಂಚಿತವಾಗಿ ಆಗಮಿಸಿದ ರೈಲು: ಬೆಂಗಳೂರಿನಿಂದ ಹುಬ್ಬಳ್ಳಿಗೆ 40 ನಿಮಿಷ ಮುಂಚಿತವಾಗಿಯೇ ವಂದೇ ಭಾರತ್ ರೈಲು ಆಗಮಿಸಿದ್ದು, ನಂತರ ಕೆಲವೊತ್ತು ಧಾರವಾಡ ರೈಲ್ವೇ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು. 40 ನಿಮಿಷ ಮುಂಚಿತವಾಗಿ ರೈಲು ಆಗಮಿಸಿದ್ದರ ಕುರಿತು ಮಾತನಾಡಿದ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್, ಇದು ಪ್ರಾಯೋಗಿಕ ಸಂಚಾರ ಹೀಗಾಗಿ ಸಮಯದಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಮುಂದೆ ಅಧಿಕೃತವಾಗಿ ಆರಂಭವಾದಾಗ ನಿಗದಿತ ವೇಳೆ ತಿಳಿಯಲಿದೆ. ಒಂದು ಬಾರಿ ಸಂಚಾರಕ್ಕೆ ವೇಳೆ ನಿಗದಿಪಡಿಸೋದು ಸಾಧ್ಯವಿಲ್ಲ, ಇಷ್ಟರಲ್ಲಿಯೇ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗುತ್ತದೆ ಎಂದರು.
ಇದನ್ನೂ ಓದಿ: Vande bharat train: ಹುಬ್ಬಳ್ಳಿಗೆ ಆಗಮಿಸಿದ ವಂದೇ ಭಾರತ್.. ಟ್ರಯಲ್ ರನ್ ಟ್ರೈನ್ ವಿಡಿಯೋ!