ಶಿಕ್ಷಣ - ಮಹಿಳಾ ಸಬಲೀಕರಣ ಎರಡು ನನ್ನ ಆಸಕ್ತಿಯ ಕ್ಷೇತ್ರ: ನೂಕಲಾ ಉಮಾ ಹರತಿ - ಬಿ ಟೆಕ್ ಪದವೀಧರರಾಗಿರುವ ಹರತಿ
🎬 Watch Now: Feature Video
ಹೈದರಾಬಾದ್ : ಮಂಗಳವಾರ ಪ್ರಕಟವಾದ ಯುಪಿಎಸ್‌ಸಿ 2022ರ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶದಲ್ಲಿ ಮೂರನೇ ರ‍್ಯಾಂಕ್ ಗಳಿಸಿರುವ ನೂಕಲಾ ಉಮಾ ಹರತಿ ಅವರು ತಮ್ಮ ಯಶಸ್ಸನ್ನು ತನ್ನ ತಂದೆ ಪೊಲೀಸ್ ಅಧಿಕಾರಿಗೆ ಸಲ್ಲಿಸಿದ್ದಾರೆ. ಹರತಿ ಅವರ ತಂದೆ ಎನ್ ವೆಂಕಟೇಶ್ವರಲು ಪ್ರಸ್ತುತ ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೈದರಾಬಾದ್‌ನ ಐಐಟಿಯಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ ಟೆಕ್ ಪದವೀಧರರಾಗಿರುವ ಹರತಿ ಅವರು ತಮ್ಮ ಐದನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮಾನವಶಾಸ್ತ್ರ ವಿಷಯವನ್ನು ಐಚ್ಛಿಕವಾಗಿ ತೆಗೆದುಕೊಂಡಿದ್ದರು. ನಾಗರಿಕ ಸೇವೆಗಳಿಗೆ ತಯಾರಿ ನಡೆಸಲು ಯಾರು ಪ್ರೇರೇಪಿಸಿದರು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ತಂದೆಯೇ ನನಗೆ ಪ್ರೇರಣೆ ಎಂದು ಉತ್ತರಿಸಿದರು.
ಈ ಬಗ್ಗೆ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದ ಹರತಿ, ಶಿಕ್ಷಣ ಮತ್ತು ಮಹಿಳಾ ಸಬಲೀಕರಣ ಎರಡು ನನ್ನ ಆಸಕ್ತಿಯ ಕ್ಷೇತ್ರಗಳಾಗಿವೆ. 'ಅವು ಸಾಮಾಜಿಕ ಅಭಿವೃದ್ಧಿ ಸಾಧಿಸಲು ಸಹಾಯಕ ಎಂದು ನಾನು ನಂಬುತ್ತೇನೆ ಮತ್ತು ನಾನು ಅವುಗಳ ಮೇಲೆ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತೇನೆ'. ಭವಿಷ್ಯದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಎದುರು ನೋಡುತ್ತಿರುವ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಏನು ಸಲಹೆ ನೀಡುತ್ತೀರಿ ಎಂದು ಕೇಳಿದಾಗ, ಅದಕ್ಕೆ ಉತ್ತರಿಸಿದ ಅವರು, ಎಲ್ಲರೂ ಪರೀಕ್ಷೆಯ ಬಗ್ಗೆ ಸಮಗ್ರವಾಗಿ ಅರ್ಥೈಸಿಕೊಳ್ಳಬೇಕು. ಮನಪೂರ್ವಕವಾದ ತಯಾರಿ, ಶ್ರದ್ದೆ, ವ್ಯಾಸಂಗ ಹಾಗೂ ವೈಯಕ್ತಿಯ ಜೀವನವನ್ನು ಸರಿದೂಗಿಸಿಕೊಂಡು, ಒತ್ತಡವನ್ನು ನಿಯಂತ್ರಣ ಮಾಡಿಕೊಂಡು ಓದುವ ಅಭ್ಯಾಸವನ್ನು ರೂಢಿಸಿಕೊಂಡರೆ ಉತ್ತಮ ಎಂದು ಅವರು ಹೇಳಿದ್ದಾರೆ.
'ಸಿಲಬಸ್ ಮತ್ತು ಹಿಂದಿನ ವರ್ಷಗಳ ಪ್ರಶ್ನೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಿ, ಬೇರೇನೂ ಇಲ್ಲ. ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾದ ಜನರಿದ್ದರೂ ಇದು ದೀರ್ಘ ಪ್ರಯಾಣವಾಗಬಹುದು. ಆದ್ದರಿಂದ ಆಕಾಂಕ್ಷಿಗಳು ತಮ್ಮ ಭಾವನಾತ್ಮಕ ಆರೋಗ್ಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಮತ್ತು ಸಮತೋಲನದ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ಪರೀಕ್ಷೆಯ ತಯಾರಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮ ಉತ್ತಮ ಹವ್ಯಾಸಗಳನ್ನು ಅನುಸರಿಸಿ, ಇದರಿಂದ ನಿಮ್ಮ ಒತ್ತಡದ ಮಟ್ಟವನ್ನು ನೀವು ನಿರ್ವಹಿಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ಕುಟುಂಬದ ಬೆಂಬಲವು ನಿರ್ಣಾಯಕ: ತಾನು ಉತ್ತಮ ರ‍್ಯಾಂಕ್ ಗಳಿಸುವ ಭರವಸೆಯನ್ನು ಹೊಂದಿದ್ದೆ. ಆದರೆ ಪರೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆಯುವ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ. ಪರೀಕ್ಷೆಯ ಕಠಿಣ ತಯಾರಿಯಲ್ಲಿ ಕುಟುಂಬದ ಬೆಂಬಲವು ನಿರ್ಣಾಯಕವಾಗಿದೆ ಎಂದು ಒತ್ತಿ ಹೇಳಿದ ಹರತಿ, ಕುಟುಂಬದ ಬೆಂಬಲವು ಗುರಿಯನ್ನು ಸಾಧಿಸಲು ಮುಖ್ಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಮೊದಲ ರ್ಯಾಂಕ್ನ ಗುಟ್ಟು ಬಿಟ್ಟುಕೊಟ್ಟ ಇಶಿತಾ ಕಿಶೋರ್.. ಹೇಗಿತ್ತು ಗೊತ್ತಾ ಇವರ ತಯಾರಿ!