ರಾಯಚೂರು: ರಸ್ತೆ ಕ್ರಾಸ್ ಮಾಡುವಾಗ ಬಸ್ಗೆ ಸಿಲುಕಿದ ಬೈಕ್, ಇಬ್ಬರಿಗೆ ಗಾಯ.. ಸಿಸಿಟಿವಿ ವಿಡಿಯೋ - raichur CCTV Video
🎬 Watch Now: Feature Video
Published : Nov 6, 2023, 9:29 PM IST
ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಅಪಘಾತ ಸಂಭವಿಸಿದೆ. ಬಸ್ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತವೊಂದು ತಪ್ಪಿದ್ದು, ಬೈಕ್ ಸವಾರರಿಬ್ಬರಿಗೆ ಗಾಯಗಳಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಿಲೋಗಲ್ ಕ್ಯಾಂಪ್ ಗ್ರಾಮದ ನಿವಾಸಿಗಳಾದ ನಾರಾಯಣ ತಾಯಪ್ಪ ಹಾಗೂ ಅವರ ಮಗ ಕಾರ್ತಿಕ್ ಗಾಯಗೊಂಡವರು. ಬೈಕ್ ಸವಾರರು ಸಿರವಾರ ಪಟ್ಟಣದತ್ತ ಬೈಕ್‌ನಲ್ಲಿ ತೆರಳುತ್ತಿದ್ದರು. ಮಾರ್ಗಮಧ್ಯೆ ಅತ್ತನೂರು ಗ್ರಾಮದ ಹೊರವಲಯದ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು, ಸಿರವಾರಕ್ಕೆ ತೆರಳುವಾಗ ಅವಘಡ ಸಂಭವಿಸಿದೆ. ಎರಡು ಬಸ್ಗಳು ಸಮಾನ ಅಂತರದಲ್ಲಿ ಬಂದಿದ್ದು, ಆಗ ಬೈಕ್ ಸವಾರ ಅಚಾತುರ್ಯದಿಂದ ಕ್ರಾಸ್ ಮಾಡಿಕೊಂಡು ತೆರಳಲು ಯತ್ನಿಸಿದ್ದಾನೆ. ಮೊದಲಿಗೆ ಬಂದ ಬಸ್ನಿಂದ ಪಾರಾಗಿದ್ದು, ಅದರ ಜೊತೆಗೆ ಬಂದ ಬಸ್ಗೆ ಬೈಕ್ ಸಿಲುಕಿದೆ. ಬೈಕ್ ಸವಾರನನ್ನು ಕಂಡ ಬಸ್ ಚಾಲಕ ರಸ್ತೆ ಬದಿಗೆ ಚಲಾಯಿಸಿದ್ದರಿಂದ ಬೈಕ್ಗೆ ಡಿಕ್ಕಿ ಹೊಡೆಯುತ್ತ ಜಮೀನಿಗೆ ಇಳಿದು ನಿಂತಿದೆ.
ಗಾಯಗೊಂಡ ಬೈಕ್ ಸವಾರರನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಸಾರಿಗೆ ಬಸ್ ಚಾಲಕ ವಾಹನ ನಿಯಂತ್ರಣಕ್ಕೆ ತಂದು ಜಮೀನಿಗೆ ಇಳಿಸಿದ್ದರಿಂದ ಸುಮಾರು 20 ಜನರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸಿರವಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.