ಮೈಸೂರು ದಸರಾ.. ಅರಮನೆಗೆ ಆಗಮಿಸಿದ ಅರ್ಜುನನಿಗೆ ಸಾಂಪ್ರದಾಯಿಕ ಪೂಜೆ: ವಿಡಿಯೋ - ಹುಲಿ ಸೆರೆ ಕಾರ್ಯಾಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/14-09-2023/640-480-19509043-thumbnail-16x9-meg.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Sep 14, 2023, 3:06 PM IST
ಮೈಸೂರು: ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದ ಜಂಬೂ ಸವಾರಿಯ ಮಾಜಿ ಕ್ಯಾಪ್ಟನ್ ಅರ್ಜುನ ಆನೆ, ಮೈಸೂರಿನಿಂದ ತುರ್ತು ಹುಲಿ ಸೆರೆ ಕಾರ್ಯಾಚರಣೆಗೆ ಹೋಗಿದ್ದ ಕಾರಣ ಸೆಪ್ಟೆಂಬರ್ 5 ರಂದು ಅರಮನೆಗೆ ಗಜಪಡೆ ಸ್ವಾಗತ ಕಾರ್ಯಕ್ರಮದಲ್ಲಿ ಗೈರಾಗಿತ್ತು. ಹಾಗಾಗಿ ಅರ್ಜುನ ಆನೆ ಇಂದು ಅರಮನೆಗೆ ಆಗಮಿಸಿದ್ದು, ಆನೆಗೆ ಮಜ್ಜನ ಮಾಡಿಸಿ, ನಂತರ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು.
ಬಲಾಢ್ಯ ಆನೆಗಳಲ್ಲಿ ಮೊದಲಿಗನಾದ ಜಂಬೂ ಸವಾರಿಯ ಮಾಜಿ ಕ್ಯಾಪ್ಟನ್ ಅರ್ಜುನ ಆನೆ ಸೆಪ್ಟೆಂಬರ್ 1 ರಂದು ವೀರನಹೊಸಳ್ಳಿಯಲ್ಲಿ ನಡೆದ ಗಜಪಯಣದ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ 9 ಆನೆಗಳ ಜೊತೆ ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಿ ವಾಸ್ತವ್ಯ ಹೂಡಿತ್ತು. ಆ ಸಂದರ್ಭದಲ್ಲಿ ಎಚ್ ಡಿ ಕೋಟೆ ತಾಲೂಕಿನ ಕಲ್ಲಟ್ಟಿ ಗ್ರಾಮದಲ್ಲಿ ಹುಲಿಯೊಂದು ಬಾಲಕನ ಮೇಲೆ ದಾಳಿ ಮಾಡಿ ಬಾಲಕನನ್ನು ಬಲಿ ಪಡೆದಿತ್ತು. ಈ ಹುಲಿ ಸೆರೆ ಕಾರ್ಯಾಚರಣೆಗೆ ತೆರಳಿದ್ದರಿಂದ ಅರ್ಜುನ ಸೆಪ್ಟೆಂಬರ್ 5 ರಂದು ಗಜಪಡೆ ಅರಮನೆ ಪ್ರವೇಶ ಕಾರ್ಯಕ್ರಮದಲ್ಲಿ ಗೈರಾಗಿತ್ತು.
ಇಂದು ಬೆಳಗ್ಗೆ ಹುಲಿ ಸೆರೆ ಕಾರ್ಯಾಚರಣೆಯಿಂದ ಹಿಂದಿರುಗಿದ ಅರ್ಜುನ ಆನೆಯನ್ನು ಅರಮನೆಯ ಬಲರಾಮ ದ್ವಾರದ ಮೂಲಕ ಅರಣ್ಯ ಇಲಾಖೆಯ ಲಾರಿಯಲ್ಲಿ ಆನೆ ಶೆಡ್ ಇರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗಕ್ಕೆ ಕರೆತರಲಾಗಿದೆ. ಮೊದಲು ಅರ್ಜುನನಿಗೆ ಮಜ್ಜನ ಮಾಡಿಸಿ, ನಂತರ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ಅರ್ಚಕರು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಅರಮನೆಯ ಆನೆ ಶೆಡ್ಗೆ ಸ್ವಾಗತಿಸಿದರು.
ಇಂದಿನಿಂದ ಅರ್ಜುನ ಆನೆ ಗಜಪಡೆ ತಾಲೀಮಿನಲ್ಲಿ ಭಾಗವಹಿಸಲಿದೆ. ಎರಡನೇ ಹಂತದ 5 ಆನೆಗಳು ಈ ತಿಂಗಳ ಕೊನೆಯ ವೇಳೆಗೆ ಆಗಮಿಸಲಿದ್ದು, ಸೆಪ್ಟೆಂಬರ್ 15 ರಿಂದ ಗಜಪಡೆಗೆ ಭಾರ ಹೊರಿಸುವ ತಾಲೀಮು ಆರಂಭವಾಗಲಿದೆ ಎಂದು ಡಿಸಿಎಫ್ ಸೌರವ್ ಕುಮಾರ್ ಈಟಿವಿ ಭಾರತ್ಗೆ ಮಾಹಿತಿ ನೀಡಿದರು.
ಇದನ್ನೂ ನೋಡಿ : ಜಯಚಾಮರಾಜೇಂದ್ರ ಒಡೆಯರ್ ಮೊಮ್ಮಗಳು ಕರೆದ ಕೂಡಲೇ ಓಡೋಡಿ ಬಂದ ದಸರಾ ಆನೆ ರೋಹಿತ್ - ವೈರಲ್ ವಿಡಿಯೋ