ಜಲಪಾತದ ಬಂಡೆಗಳ ಮೇಲೆ ಮುಂದುವರೆದ ಪ್ರವಾಸಿಗರ ಅತಿರೇಖದ ವರ್ತನೆ.. ಮೈಮರೆತರೆ ಅಪಾಯ ಖಚಿತ - ಕೈಮರ ಚೆಕ್ ಪೋಸ್ಟ್ ನಲ್ಲಿ ಪ್ರವಾಸಿಗರಿಗೆ ನಿರ್ಬಂಧ
🎬 Watch Now: Feature Video
ಚಿಕ್ಕಮಗಳೂರು: ಕೆಲ ಜಲಪಾತಗಳಿಗೆ ನಿರ್ಬಂಧದ ಮಧ್ಯೆಯೂ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಅಪಾಯದ ಸ್ಥಳದಲ್ಲಿ ಪ್ರವಾಸಿಗರ ಮೋಜು-ಮಸ್ತಿ ಮುಂದುವರೆದಿದೆ. ಜಾರುವ ಬಂಡೆಯ ಮೇಲೂ ಪ್ರವಾಸಿಗರು ಮೈಮರೆಯುತ್ತಿದ್ದಾರೆ.
ಜಿಲ್ಲೆಯ ತರೀಕೆರೆ ತಾಲೂಕಿನ ಕಲ್ಲತ್ತಗಿರಿ ಜಲಪಾತದ ಬಳಿ ಈ ದೃಶ್ಯ ಕಂಡು ಬಂದಿದೆ. ಉಡುಪಿಯ ಅರಿಶಿನಗುಂಡಿ ಫಾಲ್ಸ್ ನಲ್ಲಿ ಯುವಕನೋರ್ವ ಕೊಚ್ಚಿಕೊಂಡು ಹೋಗಿ ದುರಂತ ಸಾವು ಕಂಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಆದರೆ ಇಲ್ಲಿನ ಪ್ರವಾಸಿಗರು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಜಿಲ್ಲಾಡಳಿತದಿಂದ ಕಲ್ಲತ್ತಗಿರಿ ಜಲಪಾತ ವೀಕ್ಷಣೆಗೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹಾಕಲಾಗಿದೆ. ಈ ನಡುವೆಯೂ ಪ್ರವಾಸಿಗರ ಅತಿರೇಖದ ವರ್ತನೆ ಮುಂದುವರೆದಿದೆ.
ಕಲ್ಲತ್ತಗಿರಿ ಜಲಪಾತದ ಎತ್ತರ ಪ್ರದೇಶದಲ್ಲಿ ಪ್ರವಾಸಿಗರ ಹುಚ್ಚಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸ್ವಲ್ಪ ಯಾಮಾರಿದ್ರು ಪ್ರಪಾತಕ್ಕೆ ಬಿದ್ದು ಕೊಚ್ಚಿಹೋಗುವ ಸಾಧ್ಯತೆ ಇದೆ. ಮಲೆನಾಡಿನಲ್ಲಿ ಮಳೆ ತಗ್ಗಿರುವ ಹಿನ್ನೆಲೆ, ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಪ್ರದೇಶದ ವೀಕ್ಷಣೆಗೆ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಜಿಲ್ಲಾಡಳಿತ ಈ ಭಾಗದ ಪ್ರವಾಸಿ ತಾಣಗಳಿಗೆ ಮೂರು ದಿನಗಳ ಕಾಲ ನಿರ್ಬಂಧ ಹೇರಿತ್ತು. ಮುಳ್ಳಯ್ಯನಗಿರಿ ಸಾಲಿನಲ್ಲಿ ಧರೆ ಕುಸಿತದಿಂದ ಬಂದ್ ಮಾಡಲಾಗಿತ್ತು. ಸೋಮವಾರ ಸಂಜೆಯಿಂದ ಪ್ರವಾಸಿಗರಿಗೆ ಅನುಮತಿ ನೀಡಲಾಗಿದ್ದು, ಕೈಮರ ಚೆಕ್ ಪೋಸ್ಟ್ ನಲ್ಲಿ ನಿರ್ಬಂಧ ಹೇರಲಾಗಿತ್ತು. ಮಳೆ ಕಡಿಮೆಯಾದ ಹಿನ್ನೆಲೆ ಸದ್ಯ ಪ್ರವಾಸಿಗರಿಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಆದ್ರೆ ಪ್ರವಾಸಿಗರು ಜಾಗ್ರತೆ ವಹಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ: Watch: ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ನೀರಿನಲ್ಲಿ ಕೊಚ್ಚಿಹೋದ ಯುವಕ.. ದೃಶ್ಯ ಮೊಬೈಲ್ನಲ್ಲಿ ಸೆರೆ