ಕೆರೆಯಲ್ಲಿ ಮುಳುಗಿ ಮೂವರು ಸಹೋದರಿಯರು ಸಾವು: ತಂಗಿಯ ರಕ್ಷಣೆಗೆ ತೆರಳಿದ್ದ ಅಕ್ಕಂದಿರು!
🎬 Watch Now: Feature Video
ಪಾಲಕ್ಕಾಡ್ (ಕೇರಳ): ಮೂವರು ಸಹೋದರಿಯರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಇಂದು (ಬುಧವಾರ) ಮಧ್ಯಾಹ್ನ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ. ನೀರಿನಲ್ಲಿ ಮುಳುಗುತ್ತಿದ್ದ ತಂಗಿಯನ್ನು ರಕ್ಷಣೆ ಮಾಡಲು ಯತ್ನಿಸಿ ಇಬ್ಬರು ಅಕ್ಕಂದಿರೂ ಸಹ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ನಶಿದಾ (26), ರಾಮ್ಶೀನಾ (23) ಮತ್ತು ರಿಂಶಿ (18) ಎಂದು ಗುರುತಿಸಲಾಗಿದೆ. ಮುನ್ನಾರ್ಕ್ಕಾಡ್ ತಾಲೂಕಿನ ಭೀಮನಾಡ್ ಪೆರುಂಕುಳಂನಲ್ಲಿ ಬೆಳಗ್ಗೆ ಸ್ನಾನಕ್ಕೆಂದು ತೆರಳಿದ್ದರು. ಆದರೆ, ನಂತರ ಮೂವರು ಸಹ ಕಾಣೆಯಾಗಿದ್ದರು. ಕೆರೆ ಬಳಿ ಬಟ್ಟೆ ಮತ್ತು ಇತರ ವಸ್ತುಗಳನ್ನು ಗಮನಿಸಿದ ಸ್ಥಳೀಯರು ಅನುಮಾನಗೊಂಡು ನೀರಿನಲ್ಲಿ ಹುಡುಕಾಟ ನಡೆಸಿದ್ದಾರೆ. ತೀವ್ರ ಶೋಧ ಕಾರ್ಯಾಚರಣೆಯ ಬಳಿಕ ಶವಗಳು ಪತ್ತೆಯಾಗಿವೆ.
ಓಣಂ ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು. ಈ ಪೈಕಿ ಇಬ್ಬರು ವಿವಾಹಿತರು. ನೀರಿನಲ್ಲಿ ರಿಂಶಿ ಮುಳುಗುತ್ತಿರುವುದನ್ನು ಕಂಡು ಇನ್ನಿಬ್ಬರು ಆಕೆಯನ್ನು ರಕ್ಷಿಸಲು ಯತ್ನಿಸಿರಬಹುದು. ಈ ವೇಳೆ ಮೂವರೂ ನೀರು ಪಾಲಾಗಿರುವ ಸಾಧ್ಯತೆ ಇದೆ. ನೀರಿನಿಂದ ಹೊರತೆಗೆದ ತಕ್ಷಣವೇ ಮೂವರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ಮನ್ನಾರ್ಕ್ಕಾಡ್ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬಕ್ಕೆ ತಾವರೆ ಹೂ ಕೀಳಲು ಹೋದ ತಂದೆ - ಮಗ ಕೆರೆಯಲ್ಲಿ ಮುಳುಗಿ ಸಾವು