ಕಾರವಾರ : ಶಿಕ್ಷಕಿ ವರ್ಗಾವಣೆ ಖಂಡಿಸಿ ಶಾಲೆಗೆ ಬೀಗ.. ಮಕ್ಕಳು, ಗ್ರಾಮಸ್ಥರಿಂದ ಪ್ರತಿಭಟನೆ - ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ
🎬 Watch Now: Feature Video
ಕಾರವಾರ (ಉತ್ತರಕನ್ನಡ): ಶಿಕ್ಷಕಿಯೋರ್ವರ ವರ್ಗಾವಣೆಯನ್ನು ಖಂಡಿಸಿ ಗ್ರಾಮಸ್ಥರು ಮತ್ತು ಎಸ್‌ಡಿಎಂಸಿಯವರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಉಪ್ಪಿನಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಿಕ್ಷಕಿ ಸಂಧ್ಯಾ ರಾಯ್ಕರ್ ಅವರ ವರ್ಗಾವಣೆಯನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ತಾಲೂಕಿನ ಉಪ್ಪಿನಪಟ್ಟಣ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಸಂಧ್ಯಾ ರಾಯ್ಕರ್ ಅವರು ಕಳೆದ 20 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಅವರನ್ನು ಹೆಚ್ಚುವರಿ ಶಿಕ್ಷಕಿ ಎಂದು ಪರಿಗಣಿಸಿ ಭಟ್ಕಳ ತಾಲೂಕಿಗೆ ವರ್ಗಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಈ ಶಾಲೆಯಲ್ಲಿ ಒಟ್ಟು 88 ವಿದ್ಯಾರ್ಥಿಗಳಿದ್ದು, ಸಂಧ್ಯಾ ಅವರನ್ನು ವರ್ಗಾಯಿಸಿದರೆ ಮೂವರು ಶಿಕ್ಷಕರೇ 1 ರಿಂದ 7ನೇ ತರಗತಿವರೆಗೆ ಪಾಠ ಮಾಡುವುದು ಕಷ್ಟಸಾಧ್ಯ. ಅಲ್ಲದೇ ಸಂಧ್ಯಾ ಅವರು ಕಳೆದ 20 ವರ್ಷದಿಂದ ಇದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮಕ್ಕಳೊಂದಿಗೆ, ಪಾಲಕರೊಂದಿಗೆ ಮತ್ತು ಗ್ರಾಮಸ್ಥರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಅವರ ವರ್ಗಾವಣೆ ಶಾಲಾ ಮಕ್ಕಳಿಗೆ ತೀವ್ರ ನೋವು ಉಂಟು ಮಾಡಿದೆ. ಮಕ್ಕಳ ಹಿತದೃಷ್ಟಿಯಿಂದ ಅವರನ್ನು ಪುನಃ ಇದೇ ಶಾಲೆಗೆ ನೇಮಕ ಮಾಡುವವರೆಗೂ ಶಾಲೆಯ ಬೀಗ ತೆರೆಯುವುದಿಲ್ಲ. ಅಲ್ಲದೇ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಭಟ್ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಜಾನನ ಪೈ , ಇಂತಹ ಶಿಕ್ಷಕರು ನಮ್ಮ ಶಾಲೆಗೆ ಅವಶ್ಯಕತೆ ಇದೆ. ಶಾಸಕರ ಬಳಿ ಚರ್ಚಸಿ ಪುನಃ ಇದೆ ಶಾಲೆಗೆ ವಾಪಸ್ ಕರೆತರಲು ಪ್ರಯತ್ನ ಮಾಡುತ್ತೇವೆ. ಪ್ರತಿಭಟನೆಯಲ್ಲಿ ಊರಿನ ಪ್ರಮುಖರಾದ ಹರಿಶ್ಚಂದ್ರ ಗೌಡ, ನಯನ ಗೌಡ, ಶ್ರೀಧರ್ ಗೌಡ, ಮಾರು ಮುಕ್ರಿ, ಶಶಿಕಲ್ ಅಂಬಿಗ, ಅನಂತ್ ಶಾನಭಾಗ್ ಹಾಗೂ ಎಸ್. ಡಿ. ಎಮ್. ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.
ಇದನ್ನೂ ಓದಿ : ಶಿಕ್ಷಕಿ ವರ್ಗಾವಣೆ ಮಾಡದಂತೆ ಶಾಲಾ ಆವರಣದಲ್ಲೇ ವಿದ್ಯಾರ್ಥಿನಿಯರ ಪ್ರತಿಭಟನೆ