ತುಮಕೂರು: ದರ್ಗಾಕ್ಕೆ ಭೇಟಿ ನೀಡಿ ಚಾದರ ಅರ್ಪಿಸಿದ ಸೊಗಡು ಶಿವಣ್ಣ

🎬 Watch Now: Feature Video

thumbnail

By

Published : Mar 15, 2023, 11:24 AM IST

ತುಮಕೂರು: ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಮಾಜಿ ಸಚಿವ ಸೊಗಡು ಶಿವಣ್ಣ ಠೇವಣಿ ಹಣ ಸಂಗ್ರಹಿಸಲು ಮತ್ತು ಜನಾಭಿಪ್ರಾಯಕ್ಕೆ ಎರಡು ಜೋಳಿಗೆ ಹಾಗೂ ತಮಟೆ ಹಿಡಿದು ತುಮಕೂರು ನಗರದಾದ್ಯಂತ ಓಡಾಡುತ್ತಿದ್ದಾರೆ. ಈ ನಡುವೆ ನಗರದ ಟೌನ್ ಹಾಲ್ ಸರ್ಕಲ್​​​ನಲ್ಲಿರುವ ನಾಗರಕಟ್ಟೆಯ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಮೀಪ ಇದ್ದ ದರ್ಗಾಕ್ಕೆ ಭೇಟಿ ನೀಡಿ ಎರಡು ಗೋರಿಗಳಿಗೆ ಹೂವು ಹಾಗೂ ಚಾದರ ಅರ್ಪಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಕಳೆದ 20 ವರ್ಷಗಳಿಂದ ತುಮಕೂರು ನಗರದಲ್ಲಿ ನನ್ನ ಸೇವೆಯನ್ನು ಪರಿಗಣಿಸುವಂತೆ ಮನವಿ ಮಾಡುತ್ತಿದ್ದೇನೆ. ಪ್ರಧಾನಿ ಮೋದಿ ಮುಸ್ಲಿಂ ಬಾಂಧವರ ಬಗ್ಗೆಯೂ ಗೌರವ ಇರಬೇಕೆಂದು ಹೇೆಳಿದ್ದಾರೆ. ಅದರಂತೆ ನಾನು ದರ್ಗಾಕ್ಕೆ ಭೇಟಿ ನೀಡುತ್ತೇನೆ. ದೇಶದಲ್ಲಿ ಅವರು ನಮ್ಮಂತೆ ಒಂದು ಸಮುದಾಯ. ನಾವು ಇಲ್ಲೇ ಬದುಕಬೇಕು, ಇಲ್ಲೇ ಸಾಯಬೇಕಿದೆ. ಹಾಗಾಗಿ ಒಟ್ಟಿಗೆ ಹೋಗಬೇಕಿದೆ" ಎಂದರು. ಅನೇಕ ಬಾರಿ ಸೊಗಡು ಶಿವಣ್ಣ ಪತ್ರಿಕಾಗೋಷ್ಠಿಗಳಲ್ಲಿ ಮುಸ್ಲಿಂ ಸಮುದಾಯದವರ ವಿರುದ್ಧ ಹರಿಹಾಯುತ್ತಲೇ ಬಂದಿದ್ದರು. ಇದೀಗ ಪ್ರಧಾನಿ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ತಾವು ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವುದಾಗಿ ಹೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 

ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯಲು ಹಾಲಿ ಶಾಸಕ ಜ್ಯೋತಿ ಗಣೇಶ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ವದಂತಿಗಳ ನಡುವೆ ಸೊಗಡು ಶಿವಣ್ಣ ಟಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ತುಮಕೂರು ನಗರದಲ್ಲಿನ ಎಲ್ಲಾ ಸಮುದಾಯದವರ ವಿಶ್ವಾಸ ಗಳಿಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಪೂರಕವಾಗಿ ಮುಸ್ಲಿಂ ಸಮುದಾಯದವರ ಮತ ಹಾಗೂ ಅವರ ವಿಶ್ವಾಸವನ್ನು ಗಳಿಸಲು ದರ್ಗಾಗಳಿಗೆ ಭೇಟಿ ನೀಡುತ್ತಿದ್ದಾರೆ. 

ಇನ್ನೊಂದೆಡೆ, ಶಾಸಕ ಜ್ಯೋತಿ ಗಣೇಶ್ ಅವರ ತಂದೆ ಸಂಸದರಾಗಿರುವ ಜಿ.ಎಸ್.ಬಸವರಾಜ್ ಸ್ಥಳೀಯ ಮುಸ್ಲಿಂ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಹಿಂದೆ ಕಾಂಗ್ರೆಸ್​​ನಲ್ಲಿ ಇದ್ದಂತಹ ಸಂದರ್ಭದಲ್ಲಿ ಅವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರೆ ಇದ್ದಾರೆ. ಹೀಗಾಗಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಜ್ಯೋತಿ ಗಣೇಶ್ ಅವರು ಪುನಃ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಕೂಡ ಮುಸ್ಲಿಂ ಸಮುದಾಯದ ಮತಗಳು ಬಹುತೇಕ ಜ್ಯೋತಿ ಗಣೇಶ ಅವರಿಗೆ ಲಭಿಸಲಿವೆ ಎಂಬ ಲೆಕ್ಕಚಾರ ಹೊಂದಲಾಗಿತ್ತು. ಇದೀಗ ಸೊಗಡು ಶಿವಣ್ಣ ಅವರು ಸಹ ಮುಸ್ಲಿಂ ಸಮುದಾಯದವರೊಂದಿಗೆ ಉತ್ತಮ ಒಡನಾಟ ಹೊಂದಲು ಮುಂದಾಗುತ್ತಿರುವುದು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಒಂದು ಜೋಳಿಗೆಗೆ ನೋಟು ಇನ್ನೊಂದು ಜೋಳಿಗೆಗೆ ವೋಟು.. ಮತದಾರರ ಮುಂದೆ ಹೊರಟ ಬಿಜೆಪಿ ನಾಯಕ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.