ಕರ್ನಾಟಕ ಚುನಾವಣಾ ಫಲಿತಾಂಶವೇ ತೆಲಂಗಾಣದಲ್ಲೂ ಬರಲಿದೆ: ಹೈದರಾಬಾದ್ನಲ್ಲಿ ಡಿಕೆಶಿ ವಿಶ್ವಾಸ - Karnataka
🎬 Watch Now: Feature Video
Published : Nov 25, 2023, 6:53 PM IST
ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭಾ ಚುನಾವಣೆಯನ್ನು ಇಡೀ ದೇಶ ಮಾತ್ರವಲ್ಲದೇ ಜಗತ್ತು ಕೂಡ ನೋಡುತ್ತಿದೆ. ತೆಲಂಗಾಣದ ಹಲವು ಕ್ಷೇತ್ರಗಳಿಗೆ ತಾನು ಭೇಟಿ ನೀಡಿದ್ದೇನೆ. ಬಿಆರ್ಎಸ್ ಪಕ್ಷದ ಆಡಳಿತದಿಂದ ಜನ ಬೇಸತ್ತಿದ್ದಾರೆ. ಕರ್ನಾಟಕ ಚುನಾವಣಾ ಫಲಿತಾಂಶವೇ ತೆಲಂಗಾಣದಲ್ಲೂ ಬರಲಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ಪರವಾಗಿ ಶುಕ್ರವಾರದಿಂದ ಎರಡು ದಿನಗಳ ಮತ ಪ್ರಚಾರದಲ್ಲಿ ಡಿ.ಕೆ.ಶಿವಕುಮಾರ್ ಪಾಲ್ಗೊಂಡಿದ್ದು, ಇಂದು ಹೈದರಾಬಾದ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ತೆಲಂಗಾಣದ ಜನರು ಬದಲಾವಣೆ ಬಯಸಿದ್ದಾರೆ. ಈ ಬಾರಿ ಪ್ರತ್ಯೇಕ ರಾಜ್ಯ ತೆಲಂಗಾಣ ಕೊಟ್ಟ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಉಡುಗೊರೆ ನೀಡುವ ಅವಕಾಶ ಸಿಕ್ಕಿದೆ ಎಂದರು.
ಗ್ರಾಮೀಣ ಭಾಗದ ಎಲ್ಲ ವರ್ಗದ ಜನರು ಕಾಂಗ್ರೆಸ್ ಆಡಳಿತಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು ಜಾರಿಯಾಗುತ್ತಿವೆ. ತಮ್ಮ ಸರ್ಕಾರ ಕರ್ನಾಟಕದ ರೈತರಿಗೆ ಉಚಿತ ವಿದ್ಯುತ್ ನೀಡಲು ಆರಂಭಿಸಿದೆ. ಕರ್ನಾಟಕದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ಆರೋಪಿಸುತ್ತಿರುವ ಬಿಆರ್ಎಸ್ ನಾಯಕರು ಒಮ್ಮೆ ನಮ್ಮ ರಾಜ್ಯಕ್ಕೆ ಬಂದು ನೋಡಲಿ. ತೆಲಂಗಾಣ ರಾಜ್ಯ ರಚನೆಯಾದರೆ ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನ ಮಾಡುತ್ತೇನೆ ಎಂಬ ಕೆಸಿಆರ್ ಹೇಳಿದ್ದರು. ಆದರೆ, ಕೆಸಿಆರ್ ತಮ್ಮ ವಚನ ಮುರಿದಿದ್ದಾರೆ. ಡಿ.9ರಂದು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಲಿದೆ. ರಾಜ್ಯ ಜನತೆಗೆ ನೀಡಿರುವ ಎಲ್ಲ ಗ್ಯಾರಂಟಿಗಳನ್ನು ಕಾಂಗ್ರೆಸ್ ಜಾರಿಗೊಳಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕಾಂಗ್ರೆಸ್ ಗೆದ್ದರೆ ನಿರುದ್ಯೋಗಿಗಳ ಸಂಕಷ್ಟ ದೂರ: ತೆಲಂಗಾಣದಲ್ಲಿ ಪ್ರಿಯಾಂಕಾ ಗಾಂಧಿ, ಡಿಕೆಶಿ ಪ್ರಚಾರ