2ನೇ ದಿನಕ್ಕೆ ಕಾಲಿಟ್ಟ ಸಚಿನ್ ಪೈಲಟ್ 'ಜನ ಸಂಘರ್ಷ ಯಾತ್ರೆ': ವಿಡಿಯೋ - ಸಚಿನ್ ಪೈಲಟ್‌ರ ಜನಸಂಘರ್ಷ ಯಾತ್ರೆ
🎬 Watch Now: Feature Video
ಜೈಪುರ: ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ನೇತೃತ್ವದಲ್ಲಿ ನಡೆಯುತ್ತಿರುವ ಜನ ಸಂಘರ್ಷ ಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದೆ. ಪಕ್ಷದ ವಿರುದ್ಧವೇ ಬಂಡಾಯ ಸಾರಿರುವ ಪೈಲಟ್ 5 ದಿನಗಳವರೆಗೆ ಅಜ್ಮೀರ್‌ನಿಂದ ಜೈಪುರದವರೆಗೆ 125 ಕಿ.ಮೀ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದು ಭ್ರಷ್ಟಾಚಾರ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಂತಹ ಜ್ವಲಂತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ.
ಅಜ್ಮೀರ್ ಜಿಲ್ಲೆಯ ಕಿಶನ್‌ಗಢ್‌ನಲ್ಲಿರುವ ಟೋಲ್ ಪ್ಲಾಜಾದಲ್ಲಿ 2ನೇ ದಿನಕ್ಕೆ ಕಾಲಿಟ್ಟಿರುವ ತನ್ನ 'ಜನಸಂಘರ್ಷ್ ಯಾತ್ರೆ'ಗೆ ಜಮಾಯಿಸಿದ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಪೈಲಟ್ "ಬೇಸಿಗೆಯಾದರೂ ಜನರು ರಸ್ತೆಗೆ ಬರುತ್ತಿದ್ದಾರೆ. ಏಕೆಂದರೆ ನಾನು ಪ್ರಸ್ತಾಪಿಸಿದ ಸಮಸ್ಯೆಗಳು ಪ್ರಸ್ತುತವಾಗಿವೆ. ರಾಜ್ಯ ಸರ್ಕಾರ ಇದನ್ನು ಗಮನಿಸುತ್ತದೆ ಎಂದು ನಾವು ಭಾವಿಸುತ್ತೇವೆ. ಇತ್ತೀಚೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಜಸ್ಥಾನ ಸಾರ್ವಜನಿಕ ಸೇವಾ ಆಯೋಗ(RPSC)ದ ಸದಸ್ಯರನ್ನು ಬಂಧಿಸಲಾಯಿತು. ಆರ್‌ಪಿಎಸ್‌ಸಿ ಸದಸ್ಯನೊಬ್ಬನನ್ನು ಬಂಧಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ಸಂಪೂರ್ಣ ರಚನೆಯನ್ನು ಬದಲಾಯಿಸುವ ಅವಶ್ಯಕತೆಯಿದೆ. "ನನ್ನ ಹೋರಾಟ ಜನರಿಗಾಗಿ. ನಾನು ಅಜ್ಮೀರ್‌ನಲ್ಲಿರುವ ಆರ್‌ಪಿಎಸ್‌ಸಿ ಕಚೇರಿಯಿಂದ ಜೈಪುರಕ್ಕೆ ನಡೆದುಕೊಂಡು ಹೋಗುತ್ತೇನೆ. ನಾನು ಸಾರ್ವಜನಿಕರ ನಡುವೆ ಇರುತ್ತೇನೆ. ಮತ್ತು ಅವರ ಆಶೀರ್ವಾದ ಪಡೆಯುತ್ತೇನೆ" ಎಂದು ಪೈಲಟ್ ಹೇಳಿದರು.
ಭ್ರಷ್ಟಾಚಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ತಮ್ಮದೇ ಪಕ್ಷದ ಸರ್ಕಾರ ಮತ್ತು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಆರಂಭಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಗೆಹ್ಲೋಟ್ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಳೆದ ತಿಂಗಳು ಸಚಿನ್ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅದರ ಬೆನ್ನಲ್ಲೇ ಇದೀಗ ಪಾದಯಾತ್ರೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದ ತಮ್ಮದೇ ಸರ್ಕಾರದ ವಿರುದ್ಧ 'ಜನಸಂಘರ್ಷ ಯಾತ್ರೆ'ಗಿಳಿದ ಸಚಿನ್ ಪೈಲಟ್