ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೇಕಾರರ ಪ್ರತಿಭಟನೆ
🎬 Watch Now: Feature Video
Published : Oct 4, 2023, 7:15 PM IST
ಬೆಳಗಾವಿ: ಸಾಲ ಬಾಧೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದ 43 ನೇಕಾರರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕು. ರಾಜ್ಯದ ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆ ಜಾರಿಗೊಳಿಸಿವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಇಂದು (ಬುಧವಾರ) ರಾಜ್ಯ ನೇಕಾರ ಸೇವಾ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಗೆ ಬೆಳಗಾವಿ ಜಿಲ್ಲೆ ಸೇರಿ ಹೊರ ಜಿಲ್ಲೆಗಳಿಂದಲೂ ಆಗಮಿಸಿದ್ದ ನೂರಾರು ನೇಕಾರರು, ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಾರ್ಮಿಕ ಸೌಲಭ್ಯ ಒದಗಿಸಬೇಕು. ತಕ್ಷಣವೇ 10 ಹೆಚ್ಪಿವರೆಗೆ ಉಚಿತ ವಿದ್ಯುತ್ ನೀಡಲು ಸರ್ಕಾರದ ಆದೇಶ ಜಾರಿಯಾಗಬೇಕು. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿನ ನೇಕಾರರ ಸಂಪೂರ್ಣ ಸಾಲ ಮನ್ನಾ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ್ ಟಿರಕಿ ಮಾತನಾಡಿ, ''ಈಗಾಗಲೇ ಉಚಿತ ವಿದ್ಯುತ್ ಆದೇಶ ಹೊರಡಿಸಿದೆ. ಆದರೆ, ಅದು ಜಾರಿ ಆಗಿಲ್ಲ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ 165 ಕೋಟಿ ರೂ. ಸಾಲದಲ್ಲಿದ್ದು, ಹಿಂದಿನ ಅಧ್ಯಕ್ಷರು ನೂರಾರು ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು'' ಎಂದು ಆಗ್ರಹಿಸಿದರು.
ನೇಕಾರರ ಮುಖಂಡ ಮಂಜುನಾಥ ಮಾತನಾಡಿ, ''ನೇಕಾರ ನೇಯ್ದ ಬಟ್ಟೆ ಖರೀದಿಸುವವರಿಲ್ಲ. ನಮ್ಮ ಸ್ಥಿತಿ ಅಧೋಗತಿಗೆ ಬಂದು ತಲುಪಿದೆ. ಹಾಗಾಗಿ ನಾವು ನೇಯ್ದ ಬಟ್ಟೆ, ಸೀರೆಯನ್ನು ಸರ್ಕಾರ ಖರೀದಿಸಿ ಸರ್ಕಾರಿ ನೌಕರರಿಗೆ ವಿತರಿಸಬೇಕು. ಅಲ್ಲದೇ, ಶಾಲಾ ಮಕ್ಕಳ ಸಮವಸ್ತ್ರವನ್ನೂ ನಮ್ಮ ಬಳಿಯೇ ಖರೀದಿಸಬೇಕು. ಇದರಿಂದ ನೇಕಾರರು ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ'' ಎಂದರು.
ಇದನ್ನೂ ಓದಿ: ಮಂಡ್ಯದಲ್ಲಿ ಯಮ, ಚಿತ್ರಗುಪ್ತನ ವೇಷ ಧರಿಸಿ ಪ್ರತಿಭಟನೆ; ವರುಣ ಕೃಪೆಗೆ ಕಾವೇರಿ ಮಾತೆಗೆ ಪೂಜೆ