ಆ. 23 ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಣೆ... ವಿಕ್ರಮ ಇಳಿದ ತಾಣವನ್ನ’ಶಿವಶಕ್ತಿ’ ಪಾಯಿಂಟ್ ಎಂದು ಕರೆದ ಮೋದಿ!

🎬 Watch Now: Feature Video

thumbnail

ಬೆಂಗಳೂರು : ದೇಶದ ಪ್ರತಿಷ್ಠಿತ ಚಂದ್ರಯಾನ 3 ಯಶಸ್ಸಿನ ನಂತರ ಅದರ ಮಹತ್ವ ಗುರುತಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ್ದಾರೆ. "ಆಗಸ್ಟ್ 23 ರಂದು ಭಾರತದ ಧ್ವಜವನ್ನು ಚಂದ್ರನ ಮೇಲೆ ಹಾರಿದ ದಿನ. ಇನ್ನು ಮುಂದೆ  ಆ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಕರೆಯಲಾಗುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳೊಂದಿಗೆ ಸಂವಾದದಲ್ಲಿ ಹೇಳಿದರು. ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಸ್ವಾಗತಿಸಿದ ಪ್ರಧಾನಿ, ಅವಿರತವಾಗಿ ಶ್ರಮಿಸಿದ ವಿಜ್ಞಾನಿಗಳ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎಂದು ಹೇಳಿದರು. 

ವಿಕ್ರಮ್ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸಿದ ಸ್ಥಳವನ್ನು 'ಶಿವಶಕ್ತಿ' ಪಾಯಿಂಟ್ ಎಂದು ಕರೆಯಲಾಗುತ್ತದೆ ಮತ್ತು ಚಂದ್ರಯಾನ -2 ಮಿಷನ್ ತನ್ನ ಹೆಜ್ಜೆಗುರುತುಗಳನ್ನು ಬಿಟ್ಟ ಸ್ಥಳವನ್ನು ತಿರಂಗಾ ಪಾಯಿಂಟ್ ಎಂದು ಕರೆಯಲಾಗುತ್ತದೆ ಎಂದು ಪ್ರಧಾನಿ ಮಾಹಿತಿ ನೀಡಿದರು. "ಮಹಿಳಾ ವಿಜ್ಞಾನಿಗಳು ಚಂದ್ರಯಾನ 3 ರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ 'ಶಿವಶಕ್ತಿ' ಅಂಶವು ಮುಂಬರುವ ಪೀಳಿಗೆಗೆ ವಿಜ್ಞಾನವನ್ನು ಜನರ ಕಲ್ಯಾಣಕ್ಕಾಗಿ ಬಳಸಲು ಪ್ರೇರೇಪಿಸುತ್ತದೆ. ಜನರ ಕಲ್ಯಾಣವು ನಮ್ಮ ಪರಮೋಚ್ಚ ಬದ್ಧತೆಯಾಗಿದೆ" ಎಂದು ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್‌ನಲ್ಲಿ ಪ್ರಧಾನಿ ಮೋದಿ ಹೇಳಿದರು. 

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಜಗತ್ತಿನ ಮೊದಲ ನೌಕೆ ತೆಗೆದ ಮೊದಲ ಚಂದ್ರನ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿಗೆ ಇಸ್ರೋ ಉಡುಗೊರೆಯಾಗಿ ನೀಡಿದೆ. ಭೂಮಿಗೆ ಶಾಶ್ವತವಾಗಿ ಗೋಚರವಾಗದಿರುವ ಚಂದ್ರದ ದಕ್ಷಿಣ ಧ್ರುವದ ಮೊದಲ ಅಧಿಕೃತ ಫೋಟೋ ಇದೀಗ ಪಿಎಂ ಮೋದಿಗೆ ಲಭ್ಯವಾಗಿದೆ. ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಚಂದ್ರಯಾನ-3 ಯೋಜನೆಯ ವಿಕ್ರಮ್ ಲ್ಯಾಂಡರ್​, ಬೆಂಗಳೂರಿನ ಇಸ್ರೋ ನಿಯಂತ್ರಣ ಕೇಂದ್ರದೊಂದಿಗೆ ಸಂವಹನ ಸಾಧಿಸಿ ಚಂದ್ರ ಚುಂಬನಕ್ಕೆ ಸಾಕ್ಷಿಯಾಗಿ ನಾಲ್ಕು ಫೋಟೋಗಳನ್ನು ಭೂಮಿಗೆ ರವಾನಿಸಿತ್ತು. ಈ ಫೋಟೋಗಳನ್ನು ಇಸ್ರೋ ತನ್ನ ಅಧಿಕೃತ ಟ್ವಿಟರ್​ನಲ್ಲಿ ಹಂಚಿಕೊಂಡಿತು. ಚಂದ್ರಯಾನ-3 ನೌಕೆ ತೆಗೆದು ಕಳಿಸಿದ್ದ ಮೊದಲ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿಗೆ ಉಡುಗೊರೆಯಾಗಿ ನೀಡಿ ಗೌರವ ಸಲ್ಲಿಸಿದೆ.

ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ದೃವದಲ್ಲಿ ಇಳಿಯುವ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಕಾರಣ ಮೋದಿ ಇಸ್ರೋದ ಐಸ್ಟ್ರಾಟ್ ಕೇಂದ್ರಕ್ಕೆ ಆಗಮಿಸಿರಲಿಲ್ಲ ಹಾಗಾಗಿ ವಿದೇಶ ಪ್ರವಾಸ ಮುಗಿಯುತ್ತಿದ್ದಂತೆ ನೇರವಾಗಿ ಬೆಂಗಳೂರಿಗೆ ಬಂದಿಳಿದು ಇಸ್ರೋಗೆ ತೆರಳಿ ವಿಜ್ಞಾನಿಗಳ ತಂಡವನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ವಿಕ್ರಂ ಲ್ಯಾಂಡರ್‌ ಮಾದರಿ, ಚಂದ್ರಯಾನ-3 ನೌಕೆ ಸೆರೆ ಹಿಡಿದ ಮೊದಲ ಫೋಟೋವನ್ನು ಪ್ರಧಾನಿ ನರೇಂದ್ರ ಮೋದಿಗೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಉಡುಗೊರೆ ನೀಡಿದರು. ಕಾರ್ಯಕ್ರಮ ಮುಗಿದ ಬಳಿಕ ಹೆಚ್​ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ನವದೆಹಲಿಗೆ ತೆರಳಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಧಾನಿಗಳನ್ನು ಬೀಳ್ಕೊಟ್ಟರು. 

ಓದಿ:  ನಾನು ಭಾರತಕ್ಕೆ ಬಂದಾಕ್ಷಣ ನಿಮ್ಮ ದರ್ಶನ ಮಾಡಲು, ಸೆಲ್ಯೂಟ್​ ಮಾಡಲು ಇಚ್ಛಿಸಿದ್ದೆ: ಬಾವುಕರಾದ ಪ್ರಧಾನಿ ಮೋದಿ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.