ಹುಬ್ಬಳ್ಳಿ ಬಳಿ ಮಠದ ಪೂಜೆ ವಿಚಾರಕ್ಕೆ ಗಲಾಟೆ: ಅರ್ಚಕನ ಮೇಲೆ ಹಲ್ಲೆ - etv bharat kannada
🎬 Watch Now: Feature Video
ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿ ಮಠದ ಪೂಜೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಗ್ರಾಮಸ್ಥರು ಹಾಗೂ ಅರ್ಚಕರ ನಡುವೆ ಮಾರಾಮಾರಿ ನಡೆದಿದೆ. ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಬಸವಣ್ಣ ದೇವಸ್ಥಾನದಲ್ಲಿ ಪ್ರಕಾಶ್ ಮುಳುಗಂದ ಮಠ ಅವರು ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಾರ್ಯವೈಖರಿಗೆ ಬೇಸತ್ತ ಗ್ರಾಮಸ್ಥರು ಅರ್ಚಕರನ್ನು ಪೂಜೆ ಮಾಡದಂತೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಮಠದ ಪೂಜೆ ವಿಷಯವಾಗಿ ಕೆಲ ಗ್ರಾಮಸ್ಥರು ಮತ್ತು ಅರ್ಚಕರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಗಲಾಟೆ ಮಾಡಿಕೊಂಡಿದ್ದಾರೆ. ಅರ್ಚಕ ಪ್ರಕಾಶ್ ಮುಳುಗಂದ ಮಠರಿಗೆ ಕೆಲವರು ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಕಳೆದ ಹಲವು ವರ್ಷಗಳಿಂದ ಪೂಜೆ ವಿಷಯವಾಗಿ ವಿವಾದ ನಡೆಯುತ್ತಲೇ ಇದ್ದು, ದೇವಸ್ಥಾನಕ್ಕೆ ಬೇರೆ ಅರ್ಚಕರನ್ನು ನೇಮಿಸಲು ಗ್ರಾಮಸ್ಥರು ಮುಂದಾಗಿದ್ದರು ಎನ್ನಲಾಗಿದೆ.
ಆದರೆ, ನಾನೇ ಪೂಜೆ ಮಾಡುತ್ತೇನೆ ಎಂದು ಪ್ರಕಾಶ್ ಮುಳುಗಂದ ಮಠ ಪಟ್ಟು ಹಿಡಿದಿದ್ದಾರೆ. ಇದೇ ವಿಚಾರಕ್ಕೆ ಹಲವು ಬಾರಿ ವಾಗ್ವಾದ ನಡೆದಿದ್ದು, ಇಂದು ಅಧಿಕಾರಿಗಳ ಗ್ರಾಮ ವಾಸ್ತವ್ಯ ಇರುವ ವೇಳೆಯೇ ಕೆಲ ಗ್ರಾಮಸ್ಥರು ಮತ್ತು ಅರ್ಚಕರು ಹೊಡೆದಾಡಿಕೊಂಡಿದ್ದಾರೆ. ಜೊತೆಗೆ ಅರ್ಚಕನ ಮಗನಿಗೂ ಕೆಲ ಗ್ರಾಮಸ್ಥರು ಥಳಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಬೇಕಿದೆ.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು.. ಅಮಾಯಕರ ಮೇಲೆ ದಾಖಲಾಗಿದ್ದ ಕೇಸ್ ವಾಪಸ್: ಕ್ಯಾಬಿನೆಟ್ ತೀರ್ಮಾನ