ಚಿಕ್ಕಮಗಳೂರು: ರಸ್ತೆ ಗುಂಡಿಗಳನ್ನು ಮುಚ್ಚಿ ಸಾಮಾಜಿಕ ಕಳಕಳಿ ಮೆರೆದ ಪೊಲೀಸರು
🎬 Watch Now: Feature Video
ಚಿಕ್ಕಮಗಳೂರು : ಜಿಲ್ಲೆಯ ದತ್ತಪೀಠದಲ್ಲಿ ಪೊಲೀಸರು ರಸ್ತೆ ಗುಂಡಿಗಳನ್ನು ಮುಚ್ಚಿ ಸಾಮಾಜಿಕ ಕಳಕಳಿ ತೋರಿದ್ದ ಬೆನ್ನಲ್ಲೇ ಇದೀಗ ಆಲ್ದೂರಿನಲ್ಲಿ ಕೂಡ ಪೊಲೀಸರು ರಸ್ತೆಗೆ ಮಣ್ಣು ಸುರಿದು ಗುಂಡಿಗಳನ್ನು ಮುಚ್ಚಿದ್ದಾರೆ. ತಮ್ಮ ಕೆಲಸದ ಒತ್ತಡದ ಮಧ್ಯೆಯೂ ಪೊಲೀಸರು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಚಿಕ್ಕಮಗಳೂರು - ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಯಥೇಚ್ಛವಾಗಿ ಗುಂಡಿಗಳಿವೆ. ಅದರಲ್ಲೂ, ಚಿಕ್ಕಮಗಳೂರು ತಾಲೂಕಿನ ಆಲ್ದೂರಿನ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸುವುದೇ ದುಸ್ತರವಾಗಿತ್ತು. ಈ ಮಾರ್ಗದಲ್ಲಿ ಶಾಲೆ ಕೂಡ ಇದ್ದು, ಹೆಚ್ಚಿನ ಅಪಘಾತಗಳು ಸಂಭವಿಸಿದೆ. ಗುಂಡಿ ತಪ್ಪಿಸಲು ಹೋಗಿ ಬಿದ್ದು-ಎದ್ದು ಹೋಗುವ ಬೈಕ್ ಸವಾರರ ಸಂಖ್ಯೆಗೇನು ಕೊರತೆ ಇರಲಿಲ್ಲ. ಹಾಗಾಗಿ, ಪೊಲೀಸರೇ ಮೂರು ಟ್ರ್ಯಾಕ್ಟರ್ ಮಣ್ಣು ತರಿಸಿ, ಸಮವಸ್ತ್ರ ಧರಿಸಿಯೇ ಕೈಯ್ಯಲ್ಲಿ ಗುದ್ದಲಿ ಹಿಡಿದು ರಸ್ತೆಗೆ ಮಣ್ಣು ತುಂಬಿಸಿದ್ದಾರೆ.
ಶಾಲಾ ಮಕ್ಕಳು ಓಡಾಡುವ ಜಾಗ ಹಾಗೂ ರಸ್ತೆಯ ಗುಂಡಿಗಳಿಂದ ಹೆಚ್ಚು ಅಪಘಾತ ಸಂಭವಿಸುತ್ತಿವೆ ಎಂದು ಅರಿತು ಶ್ರಮದಾನದ ಮೂಲಕ ರಸ್ತೆಗೆ ಮಣ್ಣು ಹಾಕಿ, ಗುಂಡಿ ಮುಚ್ಚಿದ್ದಾರೆ. ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ, ಪಿಎಸ್‍ಐ ಅಕ್ಷಿತಾ ಹಾಗೂ ಕೀರ್ತಿಕುಮಾರ್ ಉಪಸ್ಥಿತರಿದ್ದರು.
ಇದನ್ನೂ ಓದಿ : ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ ಟ್ರಾಫಿಕ್ ಪೊಲೀಸರು.. ವಿಡಿಯೋ ವೈರಲ್