96ನೇ ವಸಂತಕ್ಕೆ ಕಾಲಿಟ್ಟ ಎಲ್ ಕೆ ಅಡ್ವಾಣಿ : ಅವರ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದ ಪ್ರಧಾನಿ - ಈಟಿವಿ ಭಾರತ ಕನ್ನಡ
🎬 Watch Now: Feature Video
Published : Nov 8, 2023, 10:44 PM IST
ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಇಂದು 96ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆ ದೆಹಲಿಯಲ್ಲಿರುವ ಅವರ ನಿವಾಸಕ್ಕೆ ಪ್ರಧಾನಿ ಮೋದಿ ಅವರು ಭೇಟಿ ನೀಡಿ ಶುಭಕೋರಿದ್ದಾರೆ. ಈ ಕುರಿತು ಪ್ರಧಾನಿ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ "ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶುಭ ಕೋರಲಾಯಿತು" ಎಂದು ಬರೆದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಪೋಸ್ಟ್ನಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಹಿರಿಯ ನಾಯಕ ಅಡ್ವಾಣಿ ಅವರಿಗೆ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯಲ್ಲಿ ಶುಭಾಶಯ ತಿಳಿಸಿದ್ದರು. ಅದರಲ್ಲಿ "ಎಲ್‌ಕೆ ಅಡ್ವಾಣಿ ಜಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ನಮ್ಮ ರಾಷ್ಟ್ರವನ್ನು ಬಲಪಡಿಸಲು ನೀಡಿದ ಕೊಡುಗೆ ಅಪಾರ, ದೇಶದ ಸಮಗ್ರತೆ ಮತ್ತು ಸಮರ್ಪಣೆಗೆ ದಾರಿದೀಪವಾಗಿವೆ. ಅವರ ದೂರದೃಷ್ಟಿಯ ನಾಯಕತ್ವ ರಾಷ್ಟ್ರೀಯ ಪ್ರಗತಿ ಮತ್ತು ಏಕತೆಯನ್ನು ಹೆಚ್ಚಿಸಿದೆ. ನಾನು ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ರಾಷ್ಟ್ರ ನಿರ್ಮಾಣಕ್ಕಾಗಿ ಅವರು ಪಟ್ಟ ಪ್ರಯತ್ನಗಳು, 140 ಕೋಟಿ ಭಾರತೀಯರಿಗೆ ಸ್ಪೂರ್ತಿದಾಯಕ ಎಂದು ಬರೆದು ಕೊಂಡಿದ್ದಾರೆ. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡು ಶುಭ ಹಾರೈಸಿದ್ದಾರೆ.
ಎಲ್ ಕೆ ಅಡ್ವಾಣಿ ಹಿನ್ನೆಲೆ: 1927ರಲ್ಲಿ ಕರಾಚಿಯಲ್ಲಿ ಜನಿಸಿದ ಲಾಲ್ ಕೃಷ್ಣ ಅಡ್ವಾಣಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ವಯಂಸೇವಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅವರು 1998 - 2004ರ ನಡುವೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಗೃಹ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದರು. ಅಡ್ವಾಣಿ ಅವರು 2002 -2004 ರವರೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಉಪ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಡ್ವಾಣಿ ಅವರಿಗೆ 2015 ರಲ್ಲಿ ಎರಡನೇ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ ಪದ್ಮವಿಭೂಷಣ ನೀಡಿ ಗೌರವಿಸಲಾಗಿದೆ. ಬಿಜೆಪಿಯ ಭೀಷ್ಮ, ಉಕ್ಕಿನ ಮನುಷ್ಯ ಎಂದೇ ಅವರನ್ನು ಕರೆಯಲಾಗುತ್ತದೆ. ಅಯೋಧ್ಯಾ ರಥಯಾತ್ರೆ ಮೂಲಕ ಅಡ್ವಾಣಿ ಜನಪ್ರೀಯ ನಾಯಕರಾಗಿ ಬೆಳವಣಿಗೆ ಕಂಡವರು. 2 ಸ್ಥಾನದಿಂದ ಇಂದು ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದೆ ಎಂದರೆ ಅದಕ್ಕೆ ಅಡ್ವಾಣಿ ಕಾರಣ.
ಇದನ್ನೂ ಓದಿ: ಮಹಿಳೆಯರ ಕುರಿತು ಹೇಳಿಕೆ: ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ಮುಜಫರ್‌ಪುರದ ಸಿಜೆಎಂ ನ್ಯಾಯಾಲಯದಲ್ಲಿ ದೂರು