ದೇವಸ್ಥಾನದಲ್ಲಿ ಹಣ ಕದಿಯಲು ಮುಂದಾದ ಕಳ್ಳ.. ಗ್ರಾಮಸ್ಥರಿಂದ ಗೂಸಾ - ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ
🎬 Watch Now: Feature Video
ಮಂಡ್ಯ: ಜಿಲ್ಲೆ ನಾಗಮಂಗಲದ ಕೋಟೆ ಬೆಟ್ಟದ ಕಂಬದ ನರಸಿಂಹ ದೇವಸ್ಥಾನದಲ್ಲಿ ಕಳ್ಳನೊಬ್ಬ ಹುಂಡಿಗೆ ಕೈ ಹಾಕಿ ಗ್ರಾಮಸ್ಥರಿಂದ ಥಳಿತಕ್ಕೆ ಒಳಗಾಗಿರುವ ಘಟನೆ ನಡೆದಿದೆ. ಕಳೆದ ರಾತ್ರಿ ಕೋಟೆ ಬೆಟ್ಟದ ಕಂಬದ ನರಸಿಂಹಸ್ವಾಮಿ ದೇಗುಲಕ್ಕೆ ಕಳ್ಳನೊಬ್ಬ ಬಂದಿದ್ದಾನೆ. ಸಿನಿಮಾ ರೀತಿಯಲ್ಲಿ ಗಮ್ ತಂತಿಯೊಂದಿಗೆ ಬಂದು ಬೀಗ ಮುರಿಯದೇ, ಹುಂಡಿ ಒಡೆಯದೇ ಖತರ್ನಾಕ್ ಐಡಿಯಾ ಉಪಯೋಗಿಸಿ ಸಿಕ್ಕಿಬಿದ್ದಿದ್ದಾನೆ.
ದೇವಸ್ಥಾನಕ್ಕೆ ನುಗ್ಗಿ ಅಲ್ಲಿನ ಹುಂಡಿಯಿಂದ ಹಣವನ್ನು ಕಬ್ಬಿಣದ ಕಡ್ಡಿ ಮೂಲಕ ಕದ್ದಿದ್ದಾನೆ. ಈ ವೇಳೆ ದೇವಸ್ಥಾನದ ಸಿಸಿಟಿವಿ ಅಲರ್ಟ್ ತೋರಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಟ್ರಸ್ಟ್‌ನ ಸದಸ್ಯರು ಬಂದಿದ್ಧಾರೆ. ಈ ವೇಳೆ ಹುಂಡಿ ಹಣವನ್ನ ದೋಚುತ್ತಿದ್ದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ.
ಜನರ ಕೈಗೆ ಸಿಕ್ಕಿಬಿದ್ದ ಕಳ್ಳನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಜನರು ಬರುವಷ್ಟರಲ್ಲಿ ಹುಂಡಿಯಿಂದ 11 ಸಾವಿರದಷ್ಟು ಹಣವನ್ನ ಈ ಕಳ್ಳ ಎಗರಿಸಿದ್ದ. ಬಳಿಕ ಕಳ್ಳನಿಗೆ ಥಳಿಸಿ, ಕದ್ದ ಹಣ ಪಡೆದು ಬಳಿಕ ಪೊಲೀಸರಿಗೆ ಆತನನ್ನು ಜನರು ಒಪ್ಪಿಸಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.