ದೇವೇಗೌಡರ ಆಶೀರ್ವಾದ ಪಡೆದ ಬಳಿಕ ನಾಮಪತ್ರ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ - ಈಟಿವಿ ಭಾರತ ಕನ್ನಡ
🎬 Watch Now: Feature Video
ರಾಮನಗರ: ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಂಡಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಶಾಸಕರಾಗಲು ಜೆಡಿಎಸ್ ಪಕ್ಷದಿಂದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಇವರ ತಾಯಿ ಅನಿತಾ ಕುಮಾರಸ್ವಾಮಿ ಅವರೇ ಕ್ಷೇತ್ರದ ಶಾಸಕರಾಗಿದ್ದು, ಮಗನ ಮುಂದಿನ ರಾಜಕೀಯ ಭವಿಷ್ಯಕ್ಕಾಗಿ ರಾಮನಗರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ.
ಈ ಹಿನ್ನೆಲೆ ರಾಮನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ನಿಖಿಲ್ ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್ ಡಿ ದೇವೇಗೌಡರ ಆಶೀರ್ವಾದ ಪಡೆದರು. ನಾಮಪತ್ರ ಸಲ್ಲಿಕೆಗೂ ಮೊದಲು ಕುಟುಂಬ ಸಮೇತ ದೊಡ್ಡವರಿಂದ ಆಶೀರ್ವಾದ ಪಡೆದಿದ್ದು, ಅವರ ಪಾಲಿಗೆ ಅದು ಭಾವುಕ ಕ್ಷಣವಾಗಿತ್ತು.
ತಾತನ ಆಶೀರ್ವಾದ ಪಡೆದ ನಿಖಿಲ್ ಕುಮಾರಸ್ವಾಮಿ ಭಾವುಕರಾಗಿ ಕಣ್ಣೀರಿಟ್ಟರು. ಈ ವೇಳೆ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಅವರ ಪತ್ನಿ ಮತ್ತು ರಾಮನಗರ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ, ಹಾಗೂ ನಿಖಿಲ್ ಪತ್ನಿ ಉಪಸ್ಥಿತರಿದ್ದರು. ಬಳಿಕ ರಾಮನಗರ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ವೇಳೆ, ಅವರಿಗೆ ತಾಯಿ ಅನಿತಾ ಕುಮಾರಸ್ವಾಮಿ ಸಾಥ್ ನೀಡಿದರು. ನಗರದ ಜೂನಿಯರ್ ಕಾಲೇಜು ಮೈದಾನದಿಂದ ಮೆರವಣಿಗೆ ಹೊರಟು ಉಮೇದುವಾರಿಕೆ ಸಲ್ಲಿಕೆ ಮಾಡಲಾಯಿತು. ಇದಕ್ಕೂ ಮೊದಲು ಅವರು ಚಾಮುಂಡೇಶ್ವರಿ ದೇವಾಲಯ, ಗಣೇಶ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಸಂತ ಲೂರ್ದು ಮಾತೆ ಚರ್ಚ್ ಮತ್ತು ಫೀರನ್ ಷಾ ವಾಲಿ ದರ್ಗಾದಲ್ಲಿ ನಿಖಿಲ್ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ: ರಂಗೇರಿದ ರಾಮನಗರ ಚುನಾವಣಾ ಅಖಾಡ: ಯಾರ್‍ಯಾರ ಮಧ್ಯೆ ನಡೆಯಲಿದೆ ಪೈಪೋಟಿ ಗೊತ್ತಾ?