ಧಾರವಾಡ ಜಾನಪದ ಸಂಶೋಧನಾ ಕೇಂದ್ರದ ಮಹಿಳೆಯರಿಂದ ಪಂಚಮಿ ಹಬ್ಬದ ಸಂಭ್ರಮಾಚರಣೆ: VIDEO
🎬 Watch Now: Feature Video
ಧಾರವಾಡ: ಶ್ರಾವಣ ಮಾಸದ ಮೊದಲ ಹಬ್ಬಕ್ಕೆ ಒಂದು ದಿನ ಬಾಕಿಯಿದೆ. ಹೀಗಿರುವಾಗ ಧಾರವಾಡದ ಜಾನಪದ ಸಂಶೋಧನಾ ಕೇಂದ್ರದಿಂದ ಮಹಿಳೆಯರು ಇಂದು ಉಂಡಿ ಪಂಚಮಿ ಆಚರಣೆ ಮಾಡಿ ಖುಷಿಪಟ್ಟರು. ಹೌದು, ಧಾರವಾಡದ ರಂಗಾಯಣದ ಆವರಣದಲ್ಲಿ ಸೇರಿದ ಮಹಿಳೆಯರು, ಬಗೆಬಗೆಯ ಶೇಂಗಾ ಉಂಡೆ, ರವೆ ಉಂಡೆ, ಎಳ್ಳುಂಡೆ, ಬೇಸನ್, ಅಳ್ಳು, ಕೊಬ್ಬರಿ ಉಂಡೆ, ಚಕ್ಕಲಿ, ಕೋಡಬಳೆಗಳನ್ನು ತಂದು ಕೃತಕ ನಾಗರ ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ಹಬ್ಬವನ್ನು ಆಚರಣೆ ಮಾಡಿದರು.
ಜಾನಪದ ಸಂಶೋಧನಾ ಕೇಂದ್ರದ ಮಹಿಳೆಯರು ಜಾನಪದ ಶೈಲಿಯ ಹಾಡುಗಳನ್ನು ಹಾಡಿ ಮರಕ್ಕೆ ಕಟ್ಟಿದ್ದ ಜೋಕಾಲಿ ಆಡಿ ಸಂತಸಪಟ್ಟರು. ಗ್ರಾಮೀಣ ಸೊಗಡಿನಲ್ಲಿ ನಾಗರ ಪಂಚಮಿ ಮಾಡಿ ಸಂಭ್ರಮಿಸಿದ್ದಾರೆ. ಪ್ರತಿ ವರ್ಷ ಪಂಚಮಿಯ ಮುನ್ನಾ ದಿನ ಜಾನಪದ ಸಂಶೋಧನಾ ಕೇಂದ್ರ ಉಂಡೆ ಹಬ್ಬವನ್ನಾಗಿ ಆಚರಣೆ ಮಾಡಿಕೊಂಡ ಬರುತ್ತಿದೆ. ಹೊಸ ಸೀರೆಯುಟ್ಟ ಮಹಿಳೆಯರೆಲ್ಲ ತಮ್ಮ ತಮ್ಮ ಮನೆಗಳಿಂದ ಬಗೆಬಗೆಯ ಉಂಡೆಗಳನ್ನು ಮಾಡಿಕೊಂಡು ಬಂದು ಉಂಡಿ ಪಂಚಮಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದರು.
ಮದುವೆ ಆಗಿ ಗಂಡನ ಮನೆಗೆ ಹೋದ ಮಹಿಳೆಯರು ಹಬ್ಬಕ್ಕಾಗಿ ಸಹ ತವರು ಮನೆಗೆ ಬಂದು ನಾಗರ ಪಂಚಮಿ ಹಬ್ಬ ಆಚರಣೆ ಮಾಡುವುದು ವಿಶೇಷವಾಗಿದೆ. ಈ ಹಬ್ಬಕ್ಕಾಗಿ ವಾರದ ಮುಂಚಿತವಾಗಿ ಬಗೆಬಗೆಯ ಉಂಡೆಗಳನ್ನು ತಯಾರು ಮಾಡುತ್ತಾರೆ. ಸಿಹಿಯಾದ ಉಂಡೆ ಜೊತೆ ಚಕ್ಕಲಿ, ಕೋಡು ಬಳೆಯನ್ನು ಸಹ ತಯಾರಿಸುತ್ತಾರೆ. ನಾಗ ದೇವರಿಗೆ ಹಾಲೆರೆದು ಪಂಚಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. "ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಹಬ್ಬಗಳ ಆಚರಣೆಯ ಪರಿಪಾಠ ಕಡಿಮೆ ಆಗುತ್ತಿದೆ. ಆದರೆ ನಮ್ಮ ಹಿರಿಯರು ಆಚರಣೆ ಮಾಡುತ್ತ ಬಂದಿರುವ ಹಬ್ಬವನ್ನು ಯುವ ಪೀಳಿಗೆಗೆ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಮಹಿಳೆಯರೆಲ್ಲ ಸೇರಿ ನಾಗರ ಪಂಚಮಿ ಆಚರಣೆ ಮಾಡಿದ್ದೇವೆ" ಎಂದು ಹಬ್ಬದಲ್ಲಿ ಭಾಗವಹಿಸಿದ್ದ ಮೈನಾರಾಣಿ ತಿಳಿಸಿದರು.
ಇದನ್ನೂ ಓದಿ: ಹಗಲಿನಲ್ಲಿ ಅಪರೂಪಕ್ಕೆ ಕಂಡ ಲೂನಾ ಮೊಥ್, ಇದಕ್ಕೆ ಬಾಯಿಯೇ ಇಲ್ಲಾ! VIDEO