'ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ': ಶಾಮನೂರು ಆರೋಪಕ್ಕೆ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದೇನು? - etv bharat kannada
🎬 Watch Now: Feature Video
Published : Oct 2, 2023, 4:21 PM IST
ಚಿಕ್ಕೋಡಿ(ಬೆಳಗಾವಿ): ರಾಜ್ಯ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ನನಗೆ ಸ್ಪಷ್ಟವಾಗಿ ತಿಳಿದಿಲ್ಲ ಎಂದು ಶಾಸಕ ಲಕ್ಷ್ಮಣ್ ಸವದಿ ಹೇಳಿದರು. ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲಸವೊಂದರ ನಿಮಿತ್ತವಾಗಿ ಎರಡು ದಿನ ಬೆಂಗಳೂರಿಗೆ ಭೇಟಿ ನೀಡುತ್ತಿದ್ದೇನೆ, ಅಲ್ಲಿ ಅವರನ್ನು ಭೇಟಿ ಮಾಡಿ ಅವರಿಗೆ ಏನು ಮಾಹಿತಿ ಇದೆ ಮತ್ತು ಯಾವ ಅರ್ಥದಲ್ಲಿ ಈ ರೀತಿ ಹೇಳಿದ್ದಾರೆ ಅನ್ನೋದನ್ನು ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರಗಳ ಪೈಕಿ ಒಂದು ಟಿಕೆಟ್ಅನ್ನು ಕುರುಬ ಸಮಾಜದವರಿಗೆ ಹಂಚಿಕೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಕುರುಬ ಸಮುದಾಯದ ಮುಖಂಡರು ಲೋಕಸಭಾ ಟಿಕೆಟ್ ಕೇಳುತ್ತಿರುವುದರಲ್ಲಿ ತಪ್ಪಿಲ್ಲ, ನಮ್ಮ ಜನಪ್ರತಿನಿಧಿಗಳು ಕೂಡ ರಾಜಕೀಯದಲ್ಲಿ ಇರಬೇಕೆಂದು ಪ್ರತಿ ಸಮುದಾಯ ಅಪೇಕ್ಷೆ ಪಡುತ್ತದೆ. ನಾಳೆ ಬೆಳಗಾವಿ ನಗರದಲ್ಲಿ ಒಂದೂವರೆ ಲಕ್ಷ ಜನರು ಸೇರಿಕೊಂಡು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಭಾಗವಹಿಸಲಿದ್ದಾರೆ. ಈ ವಿಚಾರವನ್ನು ಅವರ ಮುಂದೆ ಪ್ರಸ್ತಾಪಿಸಬಹುದು, ಟಿಕೆಟ್ ಕೇಳುವುದರಲ್ಲಿ ತಪ್ಪಿಲ್ಲ ಎಂದು ಸವದಿ ಹೇಳಿದರು.
ಶಿವಮೊಗ್ಗ ಕಲ್ಲು ತೂರಾಟ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಆರೋಪದ ಕುರಿತು ಮಾತನಾಡಿ, ಈಶ್ವರಪ್ಪನವರು ಇಂತಹ ಆರೋಪ ಮಾಡುವುದು ಹೊಸದೇನಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: 'ಬೀರು ಬೇಡ, ನೀರು ಬೇಕು; ಸಾರಾಯಿ ಬೇಡ, ಶಿಕ್ಷಣ ಬೇಕು': ಬೆಳಗಾವಿಯಲ್ಲಿ ಮದ್ಯ ನಿಷೇಧಿಸಲು ಮಹಿಳೆಯರ ಆಗ್ರಹ