ಕೇರಳ: ಸ್ಪೀಕರ್ ಕಚೇರಿ ಎದುರು ಶಾಸಕರ ಘರ್ಷಣೆ, ನಾಲ್ವರಿಗೆ ಗಾಯ - ಕೇರಳ ವಿಧಾನಸಭೆಯ ಅಧಿವೇಶನ
🎬 Watch Now: Feature Video
ತಿರುವನಂತಪುರಂ: ಕೇರಳ ವಿಧಾನಸಭೆಯ ಅಧಿವೇಶನದ ಎರಡನೇ ದಿನದಂದು ಭಾರಿ ಘರ್ಷಣೆ ಏರ್ಪಟ್ಟಿದೆ. ಸ್ಪೀಕರ್ ವಿರುದ್ಧ ಧರಣಿ ಕುಳಿತ ವಿಪಕ್ಷ ನಾಯಕರನ್ನು ಮಾರ್ಷಲ್ಗಳು ಎಳೆದೊಯ್ಯುವ ವೇಳೆ ನೂಕಾಟ ನಡೆದಿದ್ದು, ನಾಲ್ವರು ಶಾಸಕರು ಗಾಯಗೊಂಡಿದ್ದಾರೆ. ಸ್ಪೀಕರ್ ಕಚೇರಿ ಎದುರು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಈ ರೀತಿಯ ಮುಖಾಮುಖಿ ಘರ್ಷಣೆ ನಡೆದಿದ್ದು ಕೇರಳ ರಾಜಕೀಯ ಇತಿಹಾಸದಲ್ಲಿಯೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ.
ಸ್ಪೀಕರ್ ಕಚೇರಿ ಎದುರು ಧರಣಿ ಕುಳಿತಿದ್ದ ಪ್ರತಿಪಕ್ಷದ ಸದಸ್ಯರನ್ನು ಮಾರ್ಷಲ್ಸ್ ಕರೆದೊಯ್ಯಲು ಯತ್ನಿಸಿದಾಗ ವಾಗ್ವಾದ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಬಲವಂತವಾಗಿ ಎಳೆದೊಯ್ದಿದ್ದಾರೆ. ಈ ವೇಳೆ ಪ್ರತಿರೋಧ ಒಡ್ಡಿದ ಹಿರಿಯ ಕಾಂಗ್ರೆಸ್ ನಾಯಕ ರಾಧಾಕೃಷ್ಣನ್‌ರನ್ನು ಮಾರ್ಷಲ್ಸ್ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದಲ್ಲದೇ, ಸನೀಶ್ ಕುಮಾರ್ ಜೋಸೆಫ್, ಕೆ.ಕೆ.ರಾಮ, ಟಿ.ವಿ.ಇಬ್ರಾಹಿಂ, ಎ.ಕೆ.ಎಂ.ಅಶ್ರಫ್, ಎಂ.ವಿನ್ಸೆಂಟ್ ಅವರಿಗೂ ಗಾಯಗಳಾಗಿವೆ. ಶಾಸಕರುಗಳನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇಂದು ಬೆಳಗ್ಗೆ 10:30ರ ಸುಮಾರಿಗೆ ಸ್ಪೀಕರ್ ಕಚೇರಿ ಎದುರು ಹೈಡ್ರಾಮಾವೇ ನಡೆಯಿತು. ಸಭಾಧ್ಯಕ್ಷರು ತಮ್ಮ ತುರ್ತು ಪ್ರಸ್ತಾವನೆಯನ್ನು ತಿರಸ್ಕರಿಸಿದ್ದನ್ನು ವಿರೋಧಿಸಿ ಎರಡನೇ ದಿನವೂ ಪ್ರತಿಪಕ್ಷಗಳು ಪ್ರತಿಭಟಿಸಿದವು. ಸಭಾಧ್ಯಕ್ಷರ ಕಚೇರಿ ಎದುರು ಧರಣಿ ಕುಳಿತು ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: ಕ್ಷಮೆಗಾಗಿ ಬಿಜೆಪಿ ಕಾಂಗ್ರೆಸ್ ಗುದ್ದಾಟ: ರಾಹುಲ್ ಸಮರ್ಥಿಸಿಕೊಂಡ ಖರ್ಗೆ, ಪಟ್ಟು ಬಿಡದ ಬಿಜೆಪಿ