ದಾವಣಗೆರೆಗೆ ತಲುಪಿದ ಅಯೋಧ್ಯೆಯ ಪವಿತ್ರ ಮಂತ್ರಾಕ್ಷತೆ: ಕಳಶ ಹೊತ್ತು ಮೆರವಣಿಗೆ ಸಾಗಿದ ಮಹಿಳೆಯರು - ಪವಿತ್ರ ಮಂತ್ರಾಕ್ಷತೆ
🎬 Watch Now: Feature Video


Published : Dec 18, 2023, 4:39 PM IST
ದಾವಣಗೆರೆ : ಅಯೋಧ್ಯೆಯ ರಾಮಮಂದಿರದಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆ ದಾವಣಗೆರೆ ತಲುಪಿತು. ನಗರದ ಪಿಬಿ ರಸ್ತೆಯಲ್ಲಿರುವ ರಾಮ ಮಂದಿರದಲ್ಲಿ ಹಿಂದೂಪರ ಸಂಘಟನೆ ಮುಖಂಡರು ಹಾಗೂ ನೆರೆದಿದ್ದ ಭಕ್ತರು ಪವಿತ್ರ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿದರು. ಈ ವೇಳೆ, ಕಳಶ ಹೊತ್ತ ಮಹಿಳೆಯರು ದಾವಣಗೆರೆ ನಗರದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಸಂಗೀತ ವಾದ್ಯಗಳ ಜೊತೆ ಸಾವಿರಾರು ಹಿಂದೂ ಬಾಂಧವರು ಪಾಲ್ಗೊಂಡಿದ್ದರು.
ಈ ಮೆರವಣಿಗೆ ರಾಮ ಮಂದಿರದಿಂದ ಆರಂಭವಾಗಿ ಕೆಬಿ ಬಡಾವಣೆಯಲ್ಲಿರುವ ಆರ್ಎಸ್ಎಸ್ ಕಚೇರಿವರೆಗೂ ಸಾಗಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲೆಯ ಪ್ರತಿ ಮನೆ ಮನೆಗೆ ಭೇಟಿ ನೀಡಿ ಪವಿತ್ರ ಮಂತ್ರಾಕ್ಷತೆ ಹಾಗೂ ರಾಮಮಂದಿರ ಫೋಟೋ ನೀಡಲಿದ್ದಾರೆ, ಜೊತೆಗೆ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಬಳಿಕ ಭೇಟಿ ನೀಡುವಂತೆ ಆಹ್ವಾನಿಸಲಿದ್ದಾರೆ.
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣದ ಕಾರ್ಯಗಳು ಅಂತಿಮ ಹಂತದಲ್ಲಿದೆ. 2024ರ ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾ ಕಾರ್ಯ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಸೇರಿದಂತೆ ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂಬಂಧ ದೇಶಾದ್ಯಂತ ಪವಿತ್ರ ಮಂತ್ರಾಕ್ಷತೆ ವಿತರಿಸುವ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ : ಅಯೋಧ್ಯಾದಿಂದ ತಂದ ಮಂತ್ರಾಕ್ಷತೆ ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಣೆ