ಅಂಜನಾದ್ರಿ ಬೆಟ್ಟದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಕಿಷ್ಕಿಂಧಾ ಯುವ ಚಾರಣ ಬಳಗ: ವಿಡಿಯೋ - etv bharat knnada
🎬 Watch Now: Feature Video
ಗಂಗಾವತಿ(ಕೊಪ್ಪಳ): ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಶಣಿವಾರ ಕಿಷ್ಕಿಂಧಾ ಯುವ ಚಾರಣ ಬಳಗದ ವತಿಯಿಂದ ಕ್ಲೀನ್ ಡ್ರೈವ್ ಹೆಸರಿನಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. " ಸುಮಾರು 40ಕ್ಕೂ ಹೆಚ್ಚು ಯುವ ಜನರ ತಂಡ ಶನಿವಾರ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೂಂಡು 50ಕ್ಕೂ ಹೆಚ್ಚು ಬ್ಯಾಗ್ಗಳಷ್ಟು ಪ್ಲಾಸ್ಟಿಕ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿದರು. ಇನ್ನೂ ನೂರಾರು ಚೀಲ ತುಂಬುವಷ್ಟು ಪ್ಲಾಸ್ಟಿಕ್ ತ್ಯಾಜ್ಯ ಇದೆ " ಎಂದು ಚಾರಣ ಬಳಗದ ಸದಸ್ಯ ಸಂತೋಷ್ ತಿಳಿಸಿದರು.
ಸಂಗ್ರಹಿಸಿದ ತ್ಯಾಜ್ಯದಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲಿಗಳ ತ್ಯಾಜ್ಯವೇ ಅಧಿಕವಾಗಿದೆ. ಪಾನ್, ಗುಟ್ಕಾ, ಬೀಡಿ, ಸಿಗರೇಟ್ ಪ್ಯಾಕ್, ಬಿಸ್ಕತ್ ಪ್ಯಾಕ್, ಇತರೆ ತಿನಿಸುಗಳ ಪ್ಯಾಕೆಟ್ಗಳನ್ನು ಎಲ್ಲೆಂದರಲ್ಲಿ ಎಸೆದಿರುವುದರಿಂದ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಕಸದ ರಾಶಿಯಾಗಿ ಮಾರ್ಪಟ್ಟಿದೆ ಮತ್ತು ಇದರಿಂದ ಬೆಟ್ಟದ ಸಹಜ ಸೌಂದರ್ಯ ನಾಶವಾಗುತ್ತದೆ. ಹೀಗಾಗಿ ಗಂಗಾವತಿ, ಹೊಸಪೇಟೆ, ಕೊಪ್ಪಳ, ಕಂಪ್ಲಿ, ಕುಷ್ಟಗಿ, ಆನೆಗೊಂದಿ, ಹನುಮನಹಳ್ಳಿಯಿಂದ ಬಂದಿದ್ದ ಸಮಾನ ಮನಸ್ಕ ಯುವ ಜನರೆಲ್ಲರೂ ಸೇರಿ ಸ್ವಚ್ಛತಾ ಅಭಿಯಾನ ನಡೆಸಿದ್ದೇವೆ ಎಂದು ಕಿಷ್ಕಿಂಧಾ ಯುವ ಚಾರಣ ಬಳಗದ ಸದಸ್ಯರು ತಿಳಿಸಿದರು.
ಸ್ವಚ್ಛತೆಯ ವೇಳೆ ಅಂಜನಾದ್ರಿ ಬೆಟ್ಟದ ಸುತ್ತಮುತ್ತ ಮದ್ಯದ ಬಾಟಲಿಗಳು ಸಿಕ್ಕಿದ್ದು, ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಯನ್ನು ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ ಎಂದು ಯುವ ಚಾರಣ ಬಳಗದ ಸದಸ್ಯರು ಬೇಸರ ವ್ಯಕ್ತಪಡಿಸಿದರು. ಈ ವೇಳೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಿದರು.