ಮಿಜೋರಾಂನ ಅತ್ಯಂತ ಕಿರಿಯ ಮಹಿಳಾ ಶಾಸಕಿ ಬ್ಯಾರಿಲ್ ವನ್ನೆಹ್ಸಂಗಿ ಹೇಳಿದ್ದೇನು? - ಚುನಾವಣಾ ಆಯೋಗ
🎬 Watch Now: Feature Video
Published : Dec 6, 2023, 8:36 AM IST
ಐಜ್ವಾಲ್: ಮಿಜೋರಾಂ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. 40 ಸದಸ್ಯ ಬಲದ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಎಂಎನ್‌ಎಫ್‌ನ್ನು ಕೆಳಗಿಳಿಸಿ ಜೆಡ್ಪಿಎಂ ಅಧಿಕಾರಕ್ಕೆ ಬಂದಿದೆ. ಐಜ್ವಾಲ್ ಸೌತ್-III ವಿಧಾನಸಭಾ ಕ್ಷೇತ್ರದಿಂದ ಬ್ಯಾರಿಲ್ ವನ್ನೈಸಂಗಿ ಗೆಲವು ಸಾಧಿಸಿದ್ದಾರೆ. ರಾಜ್ಯದ ಅತ್ಯಂತ ಕಿರಿಯ ಮಹಿಳಾ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೋರಾಮ್ ಪೀಪಲ್ಸ್ ಮೂವ್‌ಮೆಂಟ್ (ಜೆಡ್ಪಿಎಂ) ಸದಸ್ಯರಾದ ಬ್ಯಾರಿಲ್ ಅವರು ಒಟ್ಟು 9,370 ಮತಗಳನ್ನು ಪಡೆದುಕೊಂಡು ಮಿಜೋ ನ್ಯಾಷನಲ್ ಫ್ರಂಟ್‌ನ (ಎಂಎನ್ಎಫ್) ಅಭ್ಯರ್ಥಿ ಎಫ್. ಲಾಲ್ನುನ್ಮಾವಿಯಾ ಅವರನ್ನು ಸೋಲಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಮಿಜೋರಾಂ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕರಾಗಿರುವ 32 ವರ್ಷದ ಬ್ಯಾರಿಲ್ ವನ್ನೈಸಂಗಿ ಅವರು ಈ ಹಿಂದೆ ಐಜ್ವಾಲ್ ಮುನ್ಸಿಪಲ್ ಕಾರ್ಪೊರೇಷನ್(ಎಎಂಸಿ) ನಲ್ಲಿ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ನಾರ್ತ್ ಈಸ್ಟರ್ನ್ ಹಿಲ್ ವಿಶ್ವವಿದ್ಯಾನಿಲಯದಿಂದ ಎಂಎ ಪದವಿ ಪಡೆದುಕೊಂಡಿದ್ದಾರೆ. ಬ್ಯಾರಿಲ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ಬ್ಯಾರಿಲ್ ತನ್ನ ವೃತ್ತಿಜೀವನವನ್ನು ಟಿವಿ ನಿರೂಪಕಿಯಾಗಿ ಪ್ರಾರಂಭಿಸಿದ್ದರು.
ಬ್ಯಾರಿಲ್ ವನ್ನೈಸಂಗಿ ಮಾತು: "ನಾವು ಮಹಿಳೆ ಆಗಿದ್ದೇವೆ ಎಂಬ ಕಾರಣಕ್ಕೆ ನಮ್ಮನ್ನು ತಡೆಯಬೇಕು ಎನ್ನುವುದು ಅದರ ಅರ್ಥವಲ್ಲ. ಎಲ್ಲಾ ಮಹಿಳೆಯರಿಗೆ ನಾನು ಹೇಳುವ ಒಂದು ವಿಚಾರ ಎಂದರೆ ನಾನು ಎಲ್ಲಾ ಮಹಿಳೆಯನ್ನು ಪ್ರೋತ್ಸಾಹಿಸಲು ಬಯಸುತ್ತೇನೆ. ಸಮಾಜದ ಎಲ್ಲಾ ಮಹಿಳೆಯರಿಗೆ ಈ ಸಂದೇಶವನ್ನು ನೀಡಲು ನಾನು ಬಯಸುತ್ತೇನೆ. ಇದು ಜನರ ಗೆಲುವಾಗಿದೆ. ಬದಲಾವಣೆ ಬಯಸುವ ಜನರು, ಹೆಚ್ಚಿನ ಅಭಿವೃದ್ಧಿಯನ್ನು ತರಲು ಬಯಸುವ ಜನರಿಗೆ ಈ ಗೆಲುವು ಸಮರ್ಪಿತವಾಗಿದೆ. ಯಾವುದೇ ವೈಯಕ್ತಿಕ ಒಲವು, ಸ್ವಜನಪಕ್ಷಪಾತ, ಭ್ರಷ್ಟಾಚಾರವಿಲ್ಲದೇ, ಪ್ರಾಮಾಣಿಕವಾಗಿ ಮತ್ತು ಸರಿಯಾದ ರೀತಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ" ಎಂದು ಕಿರಿಯ ಮಹಿಳಾ ಶಾಸಕಿ ಬ್ಯಾರಿಲ್ ವನ್ನೈಹಸಂಗಿ ತಿಳಿಸಿದರು.
ಇದನ್ನೂ ಓದಿ: ಬೋಟ್ ಇಂಜಿನ್ ಹಾಳಾಗಿ ಅಪಾಯದಲ್ಲಿದ್ದ 26 ಮೀನುಗಾರರ ರಕ್ಷಣೆ: ವಿಡಿಯೋ