ISRO: ಸಿಂಗಾಪುರದ 7 ಉಪಗ್ರಹಗಳನ್ನು ಹೊತ್ತು ನಭಕ್ಕೆ ಜಿಗಿದ ಇಸ್ರೋ ರಾಕೆಟ್- ವಿಡಿಯೋ - ಪಿಎಸ್‌ಎಲ್‌ವಿ ಸಿ 56 ರಾಕೆಟ್
🎬 Watch Now: Feature Video
ಆಂಧ್ರಪ್ರದೇಶ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಇಂದು ಬೆಳಗ್ಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ 56 ರಾಕೆಟ್ ಮೂಲಕ ಸಿಂಗಾಪುರದ ಭೂ ವೀಕ್ಷಣಾ ಉಪಗ್ರಹ ಡಿಎಸ್-ಎಸ್‌ಆರ್‌ಎ ಸೇರಿದಂತೆ ಏಕಕಾಲಕ್ಕೆ 7 ಉಪಗ್ರಹಗಳನ್ನು ಉಡಾವಣೆ ಮಾಡಿದೆ.
44.4 ಮೀಟರ್ ಎತ್ತರದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಅನ್ನು ಚೆನ್ನೈನಿಂದ ಸುಮಾರು 135 ಕಿ.ಮೀ ದೂರದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 6.30ಕ್ಕೆ ಸರಿಯಾಗಿ ಉಡಾವಣೆ ಮಾಡಲಾಯಿತು. PSLV-C56 ಇಸ್ರೋದ ವಾಣಿಜ್ಯ ಅಂಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ ಮಿಷನ್ ಆಗಿದೆ. ಇದರೊಂದಿಗೆ ಆರು ಇತರ ಸಣ್ಣಪುಟ್ಟ ಉಪಗ್ರಹಗಳೂ ಕಕ್ಷೆಗೆ ತೆರಳಿವೆ. ಇವುಗಳನ್ನು ''ವೆಲಾಕ್ಸ್ ಎಎಂ, ಆರ್ಕೇಡ್, ಸ್ಕೂಬ್-2, ಗೆಲೇಸಿಯ-2, ಒಆಬಿ12 ಪ್ರೈಡರ್, ನೂಲಯನ್'' ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ : ಸಿಂಗಾಪುರದ 7 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಇಸ್ರೋ ಸನ್ನದ್ಧ: ನಾಳೆ ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆ..
360 ಕೆಜಿ ತೂಕದ ಡಿಎಸ್-ಎಸ್‌ಎಆರ್ ಉಪಗ್ರಹವನ್ನು ಡಿಎಸ್‌ಟಿಎ (ಸಿಂಗಾಪುರ್ ಸರ್ಕಾರವನ್ನು ಪ್ರತಿನಿಧಿಸುತ್ತದೆ) ಮತ್ತು ಸಿಂಗಾಪುರದ ಎಸ್‌ಟಿ ಎಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಮಾಹಿತಿ ನೀಡಿದೆ. ಜೊತೆಗೆ, ಈ ರಾಕೆಟ್‌ಗೆ ಇಸ್ರೇಲ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ಅಳವಡಿಸಲಾಗಿದೆ, ಇದು ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ಹಗಲು-ರಾತ್ರಿ ಚಿತ್ರಗಳನ್ನು ತೆಗೆದುಕೊಳ್ಳಲು ಉಪಗ್ರಹವನ್ನು ಸಶಕ್ತಗೊಳಿಸುತ್ತದೆ.
ಉಡ್ಡಯನ ಯಶಸ್ವಿ- ಇಸ್ರೋ ಅಧ್ಯಕ್ಷರ ಹೇಳಿಕೆ : ಉಡ್ಡಯನದ ನಂತರ ನೆರೆದಿದ್ದ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, " ಅಭಿನಂದನೆಗಳು. ಉಡ್ಡಯನ ಯಶಸ್ವಿಯಾಗಿದೆ. ಪಿಎಸ್‌ಎಲ್‌ವಿ-ಸಿ56 ರಾಕೆಟ್ ಏಳು ಉಪಗ್ರಹಗಳನ್ನು ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಿಸಿದೆ. ಇದು NSILನ ಯೋಜನೆಯಾಗಿತ್ತು. ನಮ್ಮ ಗ್ರಾಹಕರಿಗೆ ಪ್ರಾಯೋಜಕತ್ವ ಒದಗಿಸಿದ ಸಿಂಗಾಪುರ್ ಸರ್ಕಾರಕ್ಕೆ ಅಭಿನಂದನೆ ತಿಳಿಸುತ್ತೇನೆ" ಎಂದರು.