ಕಲಬುರಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ.. ಟಿಕೆಟ್ ಆಕಾಂಕ್ಷಿಗಳಿಂದ ಶಕ್ತಿ ಪ್ರದರ್ಶನ
🎬 Watch Now: Feature Video
ಕಲಬುರಗಿ: ವಿಜಯ ಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ಭರ್ಜರಿ ಮತ ಬೇಟೆಗೆ ಇಳಿದಿದೆ. ಬಸವಕಲ್ಯಾಣದಲ್ಲಿ ಬಿಜೆಪಿ ವಿಜಯ ಯಾತ್ರೆಗೆ ಅಮಿತ್ ಶಾ ಚಾಲನೆ ಕೊಟ್ಟಿದ್ದು, ಕಲಬುರಗಿಗೆ ಕಾಲಿಟ್ಟಿರೋ ವಿಜಯ ಸಂಕಲ್ಪ ರಥಯಾತ್ರೆಗೆ ಉತ್ತಮವಾದ ಪ್ರತಿಕ್ರಿಯೆ ಸಿಗುತ್ತಿದೆ. ಟಿಕೆಟ್ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳು ಯಾತ್ರೆಯಲ್ಲಿ ಜನರನ್ನ ಸೇರಿಸುವ ಮೂಲಕ ಕಮಲ ನಾಯಕರಿಗೆ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಅಣಿಯಾಗಿದೆ. ಮೊನ್ನೆಯಷ್ಟೇ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗೆ ಅದ್ಧೂರಿಯಾಗಿ ಚಾಲನೆ ನೀಡಿದ್ದರು. ಈಗ ಬೀದರ್ ಯಾತ್ರೆ ಮುಗಿಸಿ ಕಲಬುರಗಿಗೆ ಕಾಲಿಟ್ಟಿರೋ ರಥಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಯಾತ್ರೆ ತೆರಳುತ್ತಿದೆ. ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ವಿಜಯ ರಥ ಯಾತ್ರೆಗೆ ಸಹಸ್ರಾರು ಜನ ಹರಿದು ಬಂದಿದ್ದರು.
ಕಲಬುರಗಿ ಉತ್ತರ ಕ್ಷೇತ್ರದ ನಗರೇಶ್ವರ ಸ್ಕೂಲ್ನಿಂದ ಪ್ರಾರಂಭಗೊಂಡ ರಥಯಾತ್ರೆ ಜಗತ್ ವೃತ್ತದ ವರೆಗೆ ಬೃಹತ್ ರೋಡ್ ಶೋ ಸಾಗಿತು. ಇನ್ನು, ಸಾವಿರಾರು ಜನರನ್ನು ಸೇರಿಸಿ ಬೃಹತ್ ಹೂವಿನ ಹಾರ ಹಾಕಿ, ಹೂಮಳೆ ಸುರಿಸಿ ಕಮಲ ನಾಯಕರಿಗೆ ಅದ್ದೂರಿ ಸ್ವಾಗತ ಕೋರಿದರು, ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಚಂದು ಪಾಟೀಲ್ ಮತ್ತು ಶಿವಕಾಂತ್ ಮಹಾಜನ್ ಕಮಲ ನಾಯಕರಿಗೆ ತಮ್ಮ ಜನ ಬೆಂಬಲದ ಶಕ್ತಿ ಪ್ರದರ್ಶನ ನಡೆಸಿದರು.
ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಬಿಜೆಪಿ ಸರ್ಕಾರ- ಶೆಟ್ಟರ್: ಇದೇ ವೇಳೆ ಮಾತಾಡಿದ ಜಗದೀಶ್ ಶೆಟ್ಟರ್, ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಪ್ರೀತಿ ವಿಶ್ವಾಸದಿಂದ ಜನರು ಬರುತ್ತಿದ್ದಾರೆ. ವಿಜಯ ಯಾತ್ರೆ ಉಶಸ್ವಿಯಾಗಿ ಸಾಗುತ್ತಿದೆ. ಬಿಜೆಪಿ ಬಗ್ಗೆ ಜನರ ಪ್ರೀತಿ ವಿಶ್ವಾಸ ನೋಡಿದರೆ 2023ರ ಚುನಾವಣೆಯಲ್ಲಿ 130-140 ಸೀಟ್ಗಳನ್ನು ಗೆದ್ದು ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ದೇಶಾದ್ಯಂತ ಬಣ್ಣ ಬಣ್ಣದ ರಂಗಿನ ಹೋಳಿ ಸಡಗರ- ವಿಡಿಯೋ ನೋಡಿ