ಬಾದಾಮಿ ಕ್ಷೇತ್ರದಲ್ಲಿ ಜೆಡಿಎಸ್ನಿಂದ ರಾಜಕೀಯ ತಂತ್ರಗಾರಿಕೆ: ಗೆಲುವು ಸಾಧಿಸಲು ಹನುಮಂತ ಮಾವಿನಮರದ ಪಣ - JDS party manifesto
🎬 Watch Now: Feature Video
ಬಾಗಲಕೋಟೆ: ಬಾದಾಮಿ ಮತಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ಪರ್ಧೆ ಇಲ್ಲದ ಹಿನ್ನೆಲೆ, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ ತೀವ್ರ ಪೈಪೋಟಿ ನೀಡುತ್ತಿದ್ದು, ಬಿರುಸಿನ ಪ್ರಚಾರದ ಜೊತೆಗೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲಾ ಸಮುದಾಯದವರನ್ನು ಸೇರ್ಪಡೆ ಮಾಡಿಕೊಂಡು, ಈ ಬಾರಿ ಶತಾಯ ಗತಾಯ ಗೆಲುವು ಸಾಧಿಸಬೇಕು ರಾಜಕೀಯ ತಂತ್ರಗಾರಿಕೆ ಮಾಡುತ್ತಿದ್ದಾರೆ.
ಕಳೆದ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ ಪರಿಣಾಮ 25 ಸಾವಿರ ಮತಗಳನ್ನು ಪಡೆದು ಹನುಮಂತ ಸೋಲು ಕಂಡಿದ್ದರು. ಆಗಿಂದಲೇ ಪಕ್ಷದ ಸಂಘಟನೆ ಮಾಡುತ್ತ, ಕ್ಷೇತ್ರದಲ್ಲಿ ಜನರ ಮಧ್ಯೆ ಇದ್ದು, ಕೆಲಸ ಕಾರ್ಯ ಮಾಡುತ್ತ ಬಂದಿದ್ದಾರೆ. ಈ ಬಾರಿ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸುವ ವಿಶ್ವಾಸ ಹೊಂದಿದ್ದಾರೆ. ಈ ಬಗ್ಗೆ ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಿದ್ದರಾಮಯ್ಯನವರು ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಮಾಡಿಲ್ಲ, ಕಾಂಗ್ರೆಸ್ನವರು ಸುಳ್ಳು ಹೇಳುತ್ತ, ಜನರನ್ನು ಸೆಳೆಯುವ ತಂತ್ರ ಮಾಡುತ್ತಾರೆ. ಆದರೆ ಪ್ರವಾಸೋದ್ಯಮ ಅಭಿವೃದ್ಧಿ ಆಗಲಿ, ಪಟ್ಟದಕಲ್ಲು ಸ್ಥಳಾಂತರ, ಅಗಸ್ತ್ಯತೀರ್ಥ ಹೊಂಡದ ಬಳಿ ಮನೆಗಳ ಸ್ಥಳಾಂತರ ಮಾಡುವ ಯೋಜನೆ ಸೇರಿದಂತೆ ಇತರ ಕೆಲಸ ಕಾರ್ಯಗಳು ಆಗಿಲ್ಲ ಎಂದು ಆರೋಪಿಸಿದರು.
ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಬಡ ಜನತೆ ಸಮಸ್ಯೆ ಬಗೆಹರಿಸುವುದು, ಕೈಗಾರಿಕೆ ಬೆಳೆಸಿ, ಗುಳೆ ಹೋಗದಂತೆ ತಡೆಯುವುದು, ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದು ಸೇರಿದಂತೆ ನೇಕಾರರು ಹೆಚ್ಚಾಗಿ ಇರುವ ಗುಳೇದಗುಡ್ಡ ಪಟ್ಟಣಕ್ಕೆ ಪ್ರತ್ಯೇಕ ಬಜೆಟ್, ಕೆರೂರ ಪಟ್ಟಣಕ್ಕೆ ಪ್ರತೇಕ ಬಜೆಟ್ ಹೀಗೆ ವಿವಿಧ ಅಭಿವೃದ್ಧಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಜನರಿಂದ ಈ ಬಾರಿ ಅಭೂತಪೂರ್ವ ಬೆಂಬಲ ಸಿಗಲಿದೆ ಎಂದು ಹನುಮಂತ ಮಾವಿನಮರದ ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: ಹೆಚ್ ಡಿ ದೇವೇಗೌಡರಿಂದ ಭರ್ಜರಿ ಪ್ರಚಾರ