Guru Purnima: ಗುರು ಪೂರ್ಣಿಮೆ ಎಫೆಕ್ಟ್.. ನಂಜುಂಡೇಶ್ವರನ ದೇವಸ್ಥಾನದಲ್ಲಿ ಭಕ್ತ ಸಾಗರ - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
ನಂಜನಗೂಡು (ಮೈಸೂರು) : ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ಸೋಮವಾರ ದೇವರ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಜನಸಾಗರವೇ ಹರಿದು ಬಂದಿದೆ. ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಭಕ್ತರು ಬೇರೆ ಬೇರೆ ಊರುಗಳಿಂದ ಭಾನುವಾರ ರಾತ್ರಿಯೇ ಬಂದು ದೇವಾಲಯದ ಕೈಸಾಲೆ ಹಾಗೂ ಆವರಣದಲ್ಲಿ ತಂಗಿದ್ದರು. ಬೆಳಗ್ಗೆ 4.30ರಿಂದಲೇ, ಕಪಿಲಾ ನದಿಯ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಿ ದೇವಾಲಯದ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು.
ದೇವಾಲಯದ ಆಗಮಿಕರಾದ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಮಹಾ ಮಂಗಳಾರತಿ ಸೇವೆಯ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದೇವಾಲಯದ ಮುಂಭಾಗ ಭಕ್ತರು ಉರುಳು ಸೇವೆ, ಧೂಪ, ದೀಪದ ಸೇವೆಯಲ್ಲಿ ನಿರತರಾಗಿದ್ದರು. ಮುಡಿ ಸಲ್ಲಿಸಲು, ಮುಡಿಕಟ್ಟೆಯಲ್ಲಿ ಭಕ್ತರ ಸಂದಣಿ ಏರ್ಪಟ್ಟಿತ್ತು. ಗುರು ಪೂರ್ಣಿಮೆ ಪ್ರಯುಕ್ತ ಪಾರ್ವತಿ ಸಮೇತ ಶ್ರೀ ನಂಜುಂಡೇಶ್ವರ ಸ್ವಾಮಿಯ ಮೂರ್ತಿಗಳನ್ನು ಚಿಕ್ಕ ತೇರಿನಲ್ಲಿ ಪ್ರತಿಷ್ಠಾಪಿಸಿ, ದೇವಾಲಯದ ಸುತ್ತಲು ಮೆರವಣಿಗೆ ಮಾಡಲಾಯಿತು.
ಮತ್ತೊಂದೆಡೆ ದೇವರ ವಿಶೇಷ ದರ್ಶನದ 100 ಹಾಗೂ 30 ಟಿಕೆಟ್ ಕೌಂಟರ್ ಹಾಗೂ ಪ್ರಸಾದದ ಕೌಂಟರ್ ನಲ್ಲಿ ಲಾಡು, ಕಲ್ಲು ಸಕ್ಕರೆ ಪ್ರಸಾದಕ್ಕೆ ಹೆಚ್ಚಿನ ಬೇಡಿಕೆ ಕಂಡು ಬಂದಿತು. ದಾಸೋಹ ಭವನದಲ್ಲಿ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್ ತಿಳಿಸಿದರು. ಇನ್ನು, ನಗರದ ರೈಲು ನಿಲ್ದಾಣ ಹಾಗೂ ಖಾಸಗೀ ಮತ್ತು ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂದಿದೆ.
ಇದನ್ನೂ ಓದಿ : ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಅದ್ಧೂರಿಯಾಗಿ ನಡೆದ ಗಿರಿಜಾ ಕಲ್ಯಾಣದ ತೆಪ್ಪೋತ್ಸವ- ವಿಡಿಯೋ