ವಿಜಯಪುರ: ಮಾ.21ರಿಂದ ಕತ್ನಳ್ಳಿಯ ಗುರು ಚಕ್ರವರ್ತಿ ಸದಾಶಿವ ಜಾತ್ರೆ
🎬 Watch Now: Feature Video
ವಿಜಯಪುರ: ಭಕ್ತರಿಂದ, ಭಕ್ತರಿಗಾಗಿ, ಭಕ್ತರಿಗೋಸ್ಕರ ಹಾಗೂ ಭಕ್ತರ ಅಭಿವೃದ್ಧಿಗಾಗಿ ನಡೆಯುವ ಏಕೈಕ ಜಾತ್ರೆ, ಜಿಲ್ಲೆಯ ಕತ್ನಳ್ಳಿಯ ಗುರು ಚಕ್ರವರ್ತಿ ಸದಾಶಿವ ಜಾತ್ರೆಯು ಮಾ.21ರಿಂದ 25ರವರೆಗೆ ನಡೆಯಲಿದೆ ಎಂದು ಮಠದ ಶಿವಯ್ಯ ಸ್ವಾಮಿಗಳು ಹೇಳಿದರು. ಮಠದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಮಠದಲ್ಲಿ ನಡೆಯುವ ಜಾತ್ರೆಯ ಎಲ್ಲ ಚಟುವಟಿಕೆಗಳು ಭಕ್ತರಿಂದಲೇ ನಡೆಯುತ್ತದೆ, ಆಹಾರ ಪದಾರ್ಥ ನೀಡುವುದು, ಆಹಾರ ತಯಾರಿ, ಊಟ ಬಡಿಸುವುದು ಸೇರಿದಂತೆ ಎಲ್ಲವನ್ನು ಭಕ್ತರೇ ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡುತ್ತಾರೆ. ಇಲ್ಲಿ ಮಹಿಳೆಯರಿಗೆ ಮಹಿಳೆಯರೇ ಹಾಗೂ ಪುರುಷರಿಗೆ ಪುರುಷರೇ ಊಟ ಬಡಿಸುವ ಸಂಪ್ರದಾಯವಿದೆ ಎಂದರು.
ಇದೇ ಮೊದಲು ಬಾರಿ ಸದಾಶಿವ ಜಾತ್ರಾ ಮಹೋತ್ಸವದಲ್ಲಿ ಜ್ಞಾನ ದೀಪೋತ್ಸವ ನಡೆಯಲಿದೆ. ಜ್ಞಾನ ದೀಪೋತ್ಸವದ ವಿಶೇಷ ಎಂದರೆ ಗ್ರಾಮದ ಪ್ರತಿ ಮನೆ ಹಾಗೂ ವಿವಿಧಡೆ ನೆಲೆಸಿರುವ ಭಕ್ತರ ಮನೆಗಳಲ್ಲಿ ದೀಪವನ್ನು ಜಾತ್ರೆ ಮುಗಿಯುವವರೆಗೆ ಬೆಳಗಿಸಲಿದ್ದಾರೆ. ಅಜ್ಞಾನದಿಂದ ಕತ್ತಲೆ ಹೋಗಿ ಸುಜ್ಞಾನ ಬೆಳಗಲಿ ಎನ್ನುವ ಉದ್ದೇಶವಿದೆ. ಜ್ಞಾನ ದೀಪೋತ್ಸವ ಹಚ್ಚುವುದೆಂದರೆ ಪ್ರತಿಯೊಬ್ಬರಲ್ಲಿ ಹುಚ್ಚು ಇರಬೇಕು. ಅದು ಹೇಗೆ ಇರಬೇಕು ಎಂದರೆ ಮತ್ತೊಬ್ಬರು ಮೆಚ್ಚುವಂತಿರಬೇಕು ಎಂದರು.
ಜಾತ್ರೆಯ ವಿಶೇಷತೆ: ಐದು ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಪ್ರತಿ ದಿನ ವಿವಿಧ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆ. ಮೊದಲ ದಿನ ಬೆಳಗ್ಗೆ ಜಾನುವಾರು ಜಾತ್ರೆ, ಕೃಷಿ ಮೇಳ, ಕೆಸರಿನಲ್ಲಿ ಓಟ, ಜ್ಞಾನ ದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.22ಕ್ಕೆ ಕೃತ ಗದ್ದುಗೆ ರುದ್ರಾಭೀಷೇಕ, ಕುಂಬಾಭೀಷೇಕ, ರಸಪ್ರಶ್ನೆ ಸ್ಪರ್ಧೆ, ಮಾ.23ಕ್ಕೆ ಪಲ್ಲಕ್ಕಿ ಉತ್ಸವ, ಉಚಿತ ಆರೋಗ್ಯ ಶಿಬಿರ, ರಥೋತ್ಸವ ಜರುಗಲಿದೆ ಎಂದು ಶ್ರೀಗಳು ಮಾಹಿತಿ ನೀಡಿದರು.
ಮಾ.24ಕ್ಕೆ ಸರಳ ಸಾಮೂಹಿಕ ವಿವಾಹ, ಮಾ.25ಕ್ಕೆ ಭಾರ ಎತ್ತುವ ಸ್ಪರ್ಧೆ, ಸುಪ್ರಸಿದ್ಧ ಜಂಗಿ ಕುಸ್ತಿಗಳು, ಜಾನುವಾರುಗಳಿಗೆ ಪ್ರಶಸ್ತಿ, ಬಹುಮಾನ ವಿತರಣೆ ನಡೆಯಲಿದೆ. ಇನ್ನು ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ವಿಜಯ ಜೋಶಿ, ಇತರರರು ಉಪಸ್ಥಿತರಿದ್ದರು.