Gas Leakage: ಗ್ಯಾಸ್ ಟ್ಯಾಂಕರ್ ಲೀಕ್: ಧಾರವಾಡ-ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಂಚಾರ ಬಂದ್ - ವಾಹನಗಳ ಓಡಾಟಕ್ಕೆ ಸ್ಥಗಿತ
🎬 Watch Now: Feature Video
ಧಾರವಾಡ: ರಾಷ್ಟ್ರೀಯ ಹೆದ್ದಾರಿ 4ರ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಇಂದು (ಬುಧವಾರ) ಸಂಜೆ ಎಲ್.ಪಿ.ಜಿ ಟ್ಯಾಂಕರ್ವೊಂದು ಅಂಡರ್‌ಪಾಸ್‌ನಲ್ಲಿ ಸಿಲುಕಿತ್ತು. ಇದರಿಂದಾಗಿ ಅನಿಲ ಸೋರಿಕೆಯಾಗುತ್ತಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಹೆದ್ದಾರಿಯಲ್ಲಿ ಓಡಾಡುವ ಎಲ್ಲ ವಾಹನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿದ್ದ ಹೆಚ್.ಪಿ.ಕಂಪನಿಗೆ ಸೇರಿದ ಟ್ಯಾಂಕರ್ ಇದಾಗಿದ್ದು, ಬೇಲೂರು ಸಮೀಪದ ಅಂಡರ್‌ಪಾಸ್‌ನಲ್ಲಿ ಸಿಲುಕಿದೆ. ಘಟನೆ ನಡೆದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸುದ್ದಿ ತಿಳಿದು ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಜನರು ಘಟನಾ ಸ್ಥಳದ ಬಳಿ ಹೋಗದಂತೆ ನಿಯಂತ್ರಿಸಲಾಗಿದೆ. ಗರಗ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅನಿಲ ಸಂಪೂರ್ಣವಾಗಿ ಹೊರಗೆ ಹೋಗುವವರೆಗೂ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಕಾಯಬೇಕಿದೆ.
ಬೆಳಗಾವಿಯಿಂದ ಬೆಂಗಳೂರಿಗೆ ಹೋಗುವ ವಾಹನ ಸವಾರರು ಬದಲಿ ಮಾರ್ಗ ಅನುಸರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಸೂಚನೆ ನೀಡಿದ್ದಾರೆ.
ಬದಲಿ ಮಾರ್ಗಗಳು ಹೀಗಿವೆ: 1) ಬೆಳಗಾವಿಯಿಂದ ಕಿತ್ತೂರು– ತಡಕೋಡ– ಗರಗ– ಧಾರವಾಡ ಮಾರ್ಗ 2) ಹಿರೇಬಾಗೇವಾಡಿ– ಬೈಲಹೊಂಗಲ– ಬೆಳವಡಿ– ತಡಕೋಡ– ಗರಗ– ಧಾರವಾಡ ಮಾರ್ಗ 3) ಸಂಕೇಶ್ವರ– ಹುಕ್ಕೇರಿ– ಘಟಪ್ರಭಾ– ಗೋಕಾಕ– ಯರಗಟ್ಟಿ– ಸವದತ್ತಿ– ಧಾರವಾಡ 4) ನಿಪ್ಪಾಣಿ– ಚಿಕ್ಕೋಡಿ– ಹುಕ್ಕೇರಿ– ಘಟಪ್ರಭಾ– ಗೋಕಾಕ– ಯರಗಟ್ಟಿ– ಸವದತ್ತಿ– ಧಾರವಾಡ.
ಪ್ರಯಾಣಿಕರ ಹಿತದೃಷ್ಟಿಯಿಂದ ಬೆಳಗಾವಿಯಿಂದ ಧಾರವಾಡಕ್ಕೆ ಪ್ರಯಾಣಿಸುವ ವಾಹನಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Watch video: ಗ್ಯಾಸ್ ಕಟ್ಟರ್ ಮೂಲಕ ಚಿನ್ನ ದೋಚಲು ಪ್ಲಾನ್; ಅಂಗಡಿಯಲ್ಲಿ ಸಿಬ್ಬಂದಿ ಕಂಡು ಕಳ್ಳರ ಗ್ಯಾಂಗ್ ಎಸ್ಕೇಪ್