ಬಳ್ಳಾರಿಯಲ್ಲಿ ಎನ್ಟಿಆರ್ ಪ್ರತಿಮೆ ಅನಾವರಣ ಮಾಡಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು: ವಿಡಿಯೋ
🎬 Watch Now: Feature Video
Published : Sep 5, 2023, 7:55 PM IST
ಬಳ್ಳಾರಿ: ತೆಲುಗು ಭಾಷೆ ಇರುವವರೆಗೂ ಎನ್ಟಿಆರ್ ಜೀವಂತವಾಗಿರುತ್ತಾರೆಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಹೇಳಿದರು. ಅವರು ನಗರದ ಕಮ್ಮ ಭವನದಲ್ಲಿ ಸ್ಥಾಪಿಸಿರುವ ಏಳು ವರೆ ಅಡಿ ಎತ್ತರದ ಸ್ವರ್ಣವರ್ಣದ ನಟ ಸಾರ್ವಭೌಮ ಎನ್.ಟಿ.ರಾಮರಾವ್ ಅವರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಎನ್ಟಿಆರ್ ಒಂದು ಶಕ್ತಿ, ಅವರ ಮೂರ್ತಿ ಮುಂದೆ ನಿಂತು ಸಂಕಲ್ಪ ಮಾಡಿಕೊಂಡರೆ ಅದು ನರವೇರುತ್ತದೆ. ಕಾರ್ಯಕ್ರಮದಲ್ಲಿ ಇಲ್ಲಿನ ಜನರ ಉತ್ಸಾಹ ನೋಡಿದರೆ ನಾನು ಆಂಧ್ರದಲ್ಲಿ ಇದ್ದೇನಾ, ಬಳ್ಳಾರಿಯಲ್ಲಿದ್ದೇನಾ ಎಂದು ಗೊತ್ತಾಗುತ್ತಿಲ್ಲ. ಈ ವರ್ಷ ಎನ್ಟಿಆರ್ ಅವರ ನೂರನೇ ಜಯಂತ್ಯುತ್ಸವವಾಗಿದೆ ಎಂದರು.
ಈ ಸಂದರ್ಭದಲ್ಲಿ ಅವರ ಪ್ರತಿಮೆ ಅನಾವರಣ ಮಾಡುತ್ತಿರುವುದಕ್ಕೆ ಸಂತಸ ವಾಗುತ್ತಿದೆ. ತೆಲುಗು ಸಿನಿಮಾ ರಂಗದಲ್ಲಿ ಮತ್ತೊಮ್ಮೆ ಎನ್ಟಿಆರ್ ಅವರಂತಹ ನಾಯಕ ನಟ ಹುಟ್ಟಿ ಬರೋದಿಲ್ಲ. ಅವರು ರಾಮ, ಭೀಮಾ, ವೆಂಕಟೇಶ್ವರ ಸ್ವಾಮಿ ಮೊದಲಾದ ಪಾತ್ರಗಳು ಜನ ಮಾನಸದಲ್ಲಿ ಇಂದಿಗೂ ಉಳಿದಿವೆ. ಎನ್ಟಿಆರ್ ಅವರನ್ನು ಕೇವಲ ಆಂಧ್ರದವರೆಂದು ಭಾವಿಸಬೇಕಿಲ್ಲ. ಅವರು ಈ ಭಾರತ ದೇಶದ ಆಸ್ತಿ ಇದ್ದಹಾಗೆ. ಅವರು ಆಂಧ್ರಪ್ರದೇಶದಲ್ಲಿ 1982ರಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಚಿತ್ರ ನಟರಾಗಿದ್ದ ಎನ್ಟಿಆರ್ ರಾಜಕೀಯಕ್ಕೆ ಬರಲು ಆಂಧ್ರದ ಜನರ ಸಂಕಷ್ಟವೇ ಕಾರಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ ಮಾತನಾಡಿ, ದೇಶದ ಬುದ್ಧಿವಂತ ರಾಜಕಾರಣಿಯಲ್ಲಿ ಚಂದ್ರಬಾಬು ನಾಯ್ಡು ಒಬ್ಬರು, ಒಳ್ಳೆಯ ಆಲೋಚನೆ ಮಾಡುವ ಮತ್ತು ಅಂದು ಕೊಂಡಿದ್ದನ್ನು ಮಾಡೋ ನಾಯಕ ನಾಯ್ಡು. 1999ರಲ್ಲಿ ನಾಯ್ಡು ಬಳ್ಳಾರಿಗೆ ಬಂದಿದ್ದು ಇದೀಗ ಮತ್ತೊಮ್ಮೆ ಬಂದಿದ್ದಾರೆ ಎಂದರು. ಈ ವೇಳೆ ನಗರ ಶಾಸಕ ನಾರಾ ಭರತ್ ರೆಡ್ಡಿ, ಕಮ್ಮ ಮಹಾಜನ ಸಂಘದ ಜಿಲ್ಲಾ ಅಧ್ಯಕ್ಷ ಮುಂಡ್ಲೂರು ಅನೂಪ್ ಕುಮಾರ್ ಮತ್ತಿತರರು ಇದ್ದರು.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ: ಗೃಹ ಸಚಿವ ಡಾ ಜಿ ಪರಮೇಶ್ವರ್