ಬೆಂಗಳೂರು: ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು ನಡೆಯಲಿದ್ದು, ಯಾರಿಗೆ ವಿಜಯಮಾಲೆ, ಯಾರಿಗೆ ಸೋಲು ಎಂಬ ಕುತೂಹಲ ತೀವ್ರಗೊಂಡಿದೆ.
ಮತದಾನೋತ್ತರ ಸಮೀಕ್ಷೆ ಏನೇ ಇದ್ದರೂ ಮೂರು ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ಉತ್ಸಾಹದಲ್ಲಿದ್ದಾರೆ. ಭಾರೀ ಜಿದ್ದಾಜದ್ದಿನ ಪೈಪೋಟಿಗೆ ಕಾರಣವಾಗಿರುವ ಚನ್ನಪಟ್ಟಣದಲ್ಲಿ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ. ಹೀಗಾಗಿ ಜೆಡಿಎಸ್ ಪಾಳಯದಲ್ಲಿ ರಣೋತ್ಸಾಹ ಕಂಡು ಬಂದಿದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ್ ಮಾತ್ರ ವಿಚಲಿತರಾಗಿಲ್ಲ. ಫೋಟೋ ಫಿನಿಶ್‌ನಲ್ಲಿ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಕ್ಷೇತ್ರದ ಕುರಿತು, ಮತದಾರರ ಒಲವು, ನಿಲುವುಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿರುವ ಯೋಗೇಶ್ವರ್ ಗೆಲುವು ತಮ್ಮದೇ ಎನ್ನುತ್ತಿದ್ದಾರೆ.
ಹೈವೋಲ್ಟೇಜ್ ಕ್ಷೇತ್ರದಲ್ಲಿ ಬರುತ್ತಾ ಫೋಟೋ ಫಿನಿಶ್ ರಿಸಲ್ಟ್? ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೊಮ್ಮಗ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವಿನ ಹೈವೋಲ್ಟೇಜ್ ಫೈಟ್ ಫೋಟೋ ಫಿನಿಶ್‌ನಲ್ಲಿ ಕೊನೆಗೊಳ್ಳುವ ಸಾಧ್ಯತೆ ಇದೆ. ಯೋಗೇಶ್ವರ್ ಅವರೇ ಈ ಬಗ್ಗೆ ಭವಿಷ್ಯ ನುಡಿದಿದ್ದರು. ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕುಮಾರಸ್ವಾಮಿ ವಿರುದ್ಧ ಆಡಿದ ಮಾತುಗಳು, ಹೇಳಿಕೆಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿವೆಯೇ, ಅದು ನಿಖಿಲ್ ಅಥವಾ ಯೋಗೇಶ್ವರ್ ಅವರಿಗೆ ಒಲವು ತೋರಿದೆಯೇ ಎಂಬುದು ಫಲಿತಾಂಶದ ನಂತರ ತಿಳಿಯಲಿದೆ.
ಕಾಂಗ್ರೆಸ್ ಪಾಳಯದಲ್ಲಿ ಗರಿಗೆದರಿದ ಕುತೂಹಲ: ಉಪಚುನಾವಣೆ ಫಲಿತಾಂಶ ಪ್ರಕಟವಾಗಲು ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಮೂಡಿದ್ದು, ಮೂರೂ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಎರಡು ಸ್ಥಾನಗಳಲ್ಲಿ ಪ್ರಬಲ ಸ್ಪರ್ಧೆಯಿದ್ದು, ಫಲಿತಾಂಶದ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದನ್ನು ಗೆಲ್ಲುವ ಸಾಧ್ಯತೆಯಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯವಾಗಿದೆ.
ಶಿಗ್ಗಾಂವಿಯಲ್ಲಿ ಬದಲಾಗಿದೆ ಸಂಪೂರ್ಣ ಸನ್ನಿವೇಶ: ಇನ್ನು ಶಿಗ್ಗಾಂವಿಯಲ್ಲಿ ಚುನಾವಣಾ ಸನ್ನಿವೇಶ ಸಂಪೂರ್ಣ ಬದಲಾಗಿದೆ. ಆರಂಭದಲ್ಲಿ ಭರತ್ ಪರವಾಗಿ ಏಕಪಕ್ಷೀಯವಾಗಿ ಕಾಣುತ್ತಿದ್ದ ಸ್ಪರ್ಧೆ ಕ್ರಮೇಣ ಟ್ವಿಸ್ಟ್ ಪಡೆಯಿತು. ಈ ಹಿಂದೆ ಕಾಂಗ್ರೆಸ್‌ನ ಮತ್ತೋರ್ವ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಅವರಿಗೆ ಟಿಕೆಟ್ ನೀಡದಿದ್ದಕ್ಕೆ ಬೇಸರಗೊಂಡಿದ್ದರು. ಆದರೆ ನಂತರ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ನಡೆದಿದ್ದರಿಂದ ಪರಿಸ್ಥಿತಿ ಕಾಂಗ್ರೆಸ್ ಪರವಾಗಿ ತಿರುಗಿದೆ ಎಂದು ಹೇಳಲಾಗುತ್ತಿದೆ.
2024ರ ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ಬೊಮ್ಮಾಯಿ ಅವರಿದ್ದ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 8,500 ಮತಗಳ ಮುನ್ನಡೆ ಸಾಧಿಸಿತ್ತು. ಆದರೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದರು. ಇದೇ ರೀತಿ ಮುಂದುವರಿದರೆ ಶಿಗ್ಗಾಂವಿಯಲ್ಲಿ ಫೋಟೊ ಫಿನಿಶ್ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ಏನಾಗುತ್ತೆ ಸಂಡೂರು ಫೈಟ್? ಅದೇ ರೀತಿ ಸಂಡೂರಿನಲ್ಲಿ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟವನ್ನು ಕಾಂಗ್ರೆಸ್ ಲಾಭವಾಗಿಸಿಕೊಂಡಿದೆ. ಬಿಜೆಪಿ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಂಡೂರು ಉಪ ಚುನಾವಣೆ ಗೆಲ್ಲುವ ಜವಾಬ್ದಾರಿಯನ್ನು ನೀಡಿತ್ತು. ಆದರೆ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಸ್ಥಳೀಯ ಕೆಲ ಮುಖಂಡರ ಮನಗೆದ್ದಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಬಳ್ಳಾರಿ ಸಂಸದ ಇ.ತುಕಾರಾಂ ಅವರ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಇ.ಅನ್ನಪೂರ್ಣ ಅವರಿಗೆ ಇದು ವರವಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಬಂಗಾರು ಹನುಮಂತು ಪ್ರಬಲ ಪೈಪೋಟಿ ನೀಡಿದ್ದರೂ ಅನ್ನಪೂರ್ಣ ಅವರು ಫೇವರಿಟ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
2023ರ ವಿಧಾನಸಭಾ ಚುನಾವಣೆ ಫಲಿತಾಂಶ ಗಮನಿಸಿದರೇ ಎಲ್ಲ ಮೂರು ಪಕ್ಷಗಳು ತಲಾ ಒಂದು ಸ್ಥಾನವನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಸಂಡೂರು ಹೊರತುಪಡಿಸಿ ಶಿಗ್ಗಾಂವಿ ಮತ್ತು ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲಬಹುದು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿರುವ ಹೆಚ್.ಡಿ.ಕುಮಾರಸ್ವಾಮಿ ಅವರು, ನಾನೇ ಅಲ್ಲಿ 15 ದಿನ ಪ್ರಚಾರದಲ್ಲಿ ಭಾಗವಹಿಸಿದ್ದೇನೆ. ಜನರ ಭಾವನೆ ಏನು ಅಂತ ಗೊತ್ತಿದೆ. ಗೆಲುವಿನಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೂರು ಕ್ಷೇತ್ರಗಳಿಗೆ ನವೆಂಬರ್ 13 ರಂದು ಮತದಾನ ನಡೆದಿದ್ದು, ಇಂದು (ನ.23 ರಂದು) ಮತ ಎಣಿಕೆ ನಡೆಯಲಿದೆ. ಮೂರು ರಾಜಕೀಯ ಪಕ್ಷಗಳ ನಾಯಕರ ಚಿತ್ತ ಚುನಾವಣಾ ಫಲಿತಾಂಶದ ಮೇಲೆ ನೆಟ್ಟಿದೆ.
ಇದನ್ನೂ ಓದಿ: ಉಪಚುನಾವಣೆ: ನಾಳೆ ಫಲಿತಾಂಶ, ಮತ ಎಣಿಕೆಗೆ ಸಕಲ ಸಿದ್ಧತೆ