ರಾಯಚೂರು: ಭೀಕರ ಅಗ್ನಿ ಅವಘಡ.. ಹೊತ್ತಿ ಉರಿದ ಹಾಲಿನ ಅಂಗಡಿ - ರಾಯಚೂರು
🎬 Watch Now: Feature Video
Published : Aug 22, 2023, 12:28 PM IST
ರಾಯಚೂರು: ಈಶಾನ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಹಾಲಿನ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಜಿಲ್ಲೆಯ ಸಿಂಧನೂರು ಪಟ್ಟಣದ ಕೇಂದ್ರೀಯ ಬಸ್ ನಿಲ್ದಾಣದಲ್ಲಿರುವ ಶಾಪ್‌ನಲ್ಲಿ ನಿನ್ನೆ(ಸೋಮವಾರ) ತಡರಾತ್ರಿ ಘಟನೆ ಸಂಭವಿಸಿದೆ. ಶೇಖರ್ ಎಂಬುವರಿಗೆ ಸೇರಿದ ಅಂಗಡಿ ಧಗ ಧಗನೇ ಹೊತ್ತಿ ಉರಿದಿದೆ. ತಡರಾತ್ರಿ ಶಾರ್ಟ್ ಸರ್ಕ್ಯೂಟ್ನಿಂದ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಏಕಾಏಕಿ ಇಡೀ ಅಂಗಡಿಗೆ ಬೆಂಕಿ ಆವರಿಸಿದೆ. ಇದರಿಂದ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರು ಹಾಗೂ ಸುತ್ತಲಿನ ಶಾಪ್‌ಗಳಿಗೆ ಆತಂಕ ಉಂಟಾಗಿತ್ತು.
ಮಾಹಿತಿ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸುತ್ತಲಿನ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಅಂಗಡಿಯೊಳಗೆ ಗ್ಯಾಸ್ ಸಿಲಿಂಡರ್ ಇದ್ದಿದ್ದರಿಂದ ಭಾರಿ ಆತಂಕ ಸೃಷ್ಟಿಯಾಗಿತ್ತು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಅಂಗಡಿಯೊಳಗಿನ ತಿನಿಸು ಹಾಗೂ ವಸ್ತುಗಳು ಸುಟ್ಟು ಬೂದಿಯಾಗಿವೆ. ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಕುರಿತು ಸಿಂಧನೂರು ಪೊಲೀಸರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ 'ಬದಾಮಿ ಹಾಲು, ತಿನಿಸುಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಯಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಅಂತಾ ತಿಳಿದುಬಂದಿದೆ. ಆದರೆ ಈ ಬಗ್ಗೆ ನಿಖರ ಮಾಹಿತಿಯಿಲ್ಲ. ಈವರೆಗೆ ದೂರು ದಾಖಲಾಗಿಲ್ಲ. ಸದ್ಯ ಸಾರಿಗೆ ಸಂಸ್ಥೆ ಸಿಬ್ಬಂದಿ ಠಾಣೆಗೆ ಬಂದಿದ್ದಾರೆ. ದೂರಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನ ಎರಡು ಕೋಚ್ಗಳಲ್ಲಿ ಬೆಂಕಿ