ಒಂದು ಜಿಲ್ಲೆಯ ಮೇವು ಮತ್ತೊಂದು ಜಿಲ್ಲೆಗೆ ಹೋಗುವಂತಿಲ್ಲ: ಸರ್ಕಾರದ ನಿರ್ದೇಶನಕ್ಕೆ ರೈತರ ಆಕ್ರೋಶ
🎬 Watch Now: Feature Video
Published : Sep 26, 2023, 10:53 PM IST
ಧಾರವಾಡ : ದೇಶಕ್ಕೆ ಅನ್ನ ನೀಡುವ ರೈತ ಸಮುದಾಯ ಸರಿಯಾಗಿ ಮಳೆಯಿಲ್ಲದೆ ಬೆಳೆಯಿಲ್ಲದೆ ಕಂಗಾಲಾಗಿದೆ. ಜಾನುವಾರುಗಳಿಗೂ ಮೇವು ಸಿಗುವುದು ದುಸ್ತರವಾಗಿದೆ. ಹೀಗಿರುವಾಗ ಒಂದು ಜಿಲ್ಲೆಯ ಮೇವು ಮತ್ತೊಂದು ಜಿಲ್ಲೆಗೆ ಹೋಗದಂತಹ ಯಡವಟ್ಟು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಮುಂಗಾರು ಮಳೆ ಸರಿಯಾಗಿ ಆಗದಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರದ ಕಾರ್ಮೋಡ ಆವರಿಸಿಕೊಂಡಿದೆ. ಈಗಾಗಲೇ ಸರ್ಕಾರ 195 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ. ಈಗಾಗಲೇ ಕೆಲ ಕಡೆಗಳಲ್ಲಿ ಮೇವಿನ ಕೊರತೆ ಎದ್ದು ಕಾಣುತ್ತಿದೆ. ಈ ಕೊರತೆ ನೀಗಿಸಲು ಒಂದು ಜಿಲ್ಲೆಯ ಮೇವು, ಮತ್ತೊಂದು ಜಿಲ್ಲೆಗೆ ಹೋಗದಂತೆ ತಡೆಯುವುದಕ್ಕೆ ಸರ್ಕಾರ ಮುಂದಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಪಶು ಸಂಗೋಪನಾ ಇಲಾಖೆಗೆ ಇಂತಹ ಒಂದು ಆದೇಶ ನೀಡಲಾಗಿದೆ. ಹೀಗಾಗಿ ಇಲಾಖೆಯ ಅಧಿಕಾರಿಗಳು ಈಗ ಧಾರವಾಡ ಜಿಲ್ಲೆಯ ಮೇವು ಅಕ್ಕಪಕ್ಕದ ಜಿಲ್ಲೆಗೆ ಹೋಗದಂತೆ ತಡೆಯೋದಕ್ಕೆ ಮುಂದಾಗಿದ್ದಾರೆ.
ಈ ಬಗ್ಗೆ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ರವಿ ಸಾಲಿಗೌಡರ್ ಅವರು ಮಾತನಾಡಿ, 'ನಮ್ಮ ಜಿಲ್ಲೆಯಿಂದ ಇರುವಂತಹ ಮೇವನ್ನು ಬೇರೆ ಜಿಲ್ಲೆಗೆ ಮಾರಾಟ ಮಾಡಬಾರದು ಎಂದು ನಾವು ಈಗಾಗಲೇ ಎಚ್ಚರಿಕೆ ವಹಿಸುತ್ತಿದ್ದೇವೆ. ಈಗಾಗಲೇ ನಾವು ಮುಖ್ಯ ಪಶುವೈದ್ಯಾದಿಕಾರಿಗಳಿಗೆ ತಿಳಿಸಿದ್ದೇವೆ. ಈ ರೀತಿ ಮೇವು ಬೇರೆ ಕಡೆ ಹೋದರೆ ಅದನ್ನು ತಡೆಯುವಂತೆ ಎಚ್ಚರಿಕೆ ವಹಿಸುವಂತೆ ಹೇಳಿದ್ದೇವೆ' ಎಂದಿದ್ದಾರೆ.
ಈ ಬಗ್ಗೆ ರೈತ ಶಂಕರ ಕೋಮಾರದೇಸಾಯಿ ಪ್ರತಿಕ್ರಿಯಿಸಿ, 'ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಮೇವು ಹೋಗುವುದನ್ನು ತಡೆಯಲು ಮುಂದಾಗಿರುವ ಸರ್ಕಾರದ ನಿರ್ಧಾರ ತಪ್ಪು. ರೈತನಿಗೆ ತೊಂದರೆ ಇದ್ದಾಗ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಸಹಾಯ ಮಾಡುವುದು ತಪ್ಪಲ್ಲ. ಸರ್ಕಾರ ಇದನ್ನು ತಡೆಯುವುದಾದರೆ ಆ ಜಿಲ್ಲೆಯಲ್ಲೇ ಮೇವು ಸಂಗ್ರಹಕ್ಕೆ ಅನುಕೂಲ ಮಾಡಿಕೊಡಬೇಕು. ತಾವೇ ಇನ್ನು ನಿರ್ಧಾರ ತೆಗೆದುಕೊಳ್ಳದೆ ರೈತರಿಗೆ ಇನ್ನೂ ತೊಂದರೆಯನ್ನು ಉಂಟುಮಾಡಿದ್ದಾರೆ. ಬೇರೆ ಜಿಲ್ಲೆಗೆ ಮೇವು ಕಳಿಸಲು ರೈತರಿಗೆ ಸಂಪೂರ್ಣ ಹಕ್ಕಿದೆ' ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ತಾನು ಬೆಳೆದ ಕಬ್ಬಿನ ಫಸಲನ್ನು ಉಚಿತವಾಗಿ ದನಕರುಗಳಿಗೆ ನೀಡಿದ ರೈತ