ಸಂಕೋಶ್ ನದಿಯಲ್ಲಿ ಆನೆ ತಲೆ ಪತ್ತೆ: ದಂತಕ್ಕಾಗಿ ಬೇಟೆಯಾಡಿ ಕೊಂದಿರುವ ಶಂಕೆ
🎬 Watch Now: Feature Video
ಜಲ್ಪೈಗುರಿ(ಪಶ್ಚಿಮ ಬಂಗಾಳ): ಬಕ್ಸಾ ಹುಲಿ ಸಂರಕ್ಷಿತ ಪ್ರದೇಶದ ವೋಲ್ಕಾ ರೇಂಜ್ ಅರಣ್ಯ ಸಿಬ್ಬಂದಿ ಶುಕ್ರವಾರ ಮಧ್ಯಾಹ್ನ ಬಂಗಾಳ - ಅಸ್ಸೋಂ ಗಡಿ ಬಳಿಯ ಸಂಕೋಶ್ ನದಿಯಲ್ಲಿ ಆನೆ ತುಂಡರಿಸಿ ನದಿಯಲ್ಲಿಟ್ಟಿದ್ದ ತಲೆಯನ್ನು ಪತ್ತೆ ಮಾಡಿದ್ದಾರೆ. ಆದರೆ, ತಲೆಯ ಭಾಗದಲ್ಲಿ ಆನೆಯ ದಂತಗಳು ಇರಲಿಲ್ಲ. ಘಟನೆಯ ಹಿಂದೆ ಅಸ್ಸೋಂನ ಕಳ್ಳ ಬೇಟೆಗಾರರ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಮೂಲಗಳ ಪ್ರಕಾರ ಬೆಲೆಬಾಳುವ ದಂತಗಳಿಗಾಗಿ ಪ್ರಾಣಿ ಬಲಿಯಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯರು ನದಿಯಲ್ಲಿ ಆನೆಯ ತಲೆಯನ್ನು ಗಮನಿಸಿ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ವೋಲ್ಕಾ ರೇಂಜ್ ಆಫೀಸರ್ ಪ್ರಭಾತ್ ಬರ್ಮನ್ ಘಟನಾ ಸ್ಥಳಕ್ಕೆ ಧಾವಿಸಿದರು. ಆನೆಯ ತುಂಡರಿಸಿದ ತಲೆ, ದಂತ ಇಲ್ಲದಿರುವುದನ್ನು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಪ್ರಾಥಮಿಕ ತನಿಖೆಗಳು ಈ ಘಟನೆ ಕಳ್ಳ ಬೇಟೆಗೆ ಸಂಬಂಧಿಸಿರಬಹುದು ಎಂದು ತಿಳಿಸಿವೆ. ಕಳ್ಳ ಬೇಟೆಗಾರರು ಆನೆಯನ್ನು ಕೊಂದು, ಅದರ ದಂತಗಳನ್ನು ತೆಗೆದು, ದೇಹವನ್ನು ತುಂಡರಿಸಿ ನದಿಯಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಊಹಿಸಲಾಗಿದೆ.
ಬಕ್ಸಾ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು, ಬಕ್ಸಾ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಅಪುರ್ಬಾ ಸೇನ್ ಸೇರಿದಂತೆ ಇತರ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಘಟನಾ ಸ್ಥಳಕ್ಕೆ ಆಗಮಿಸಿದರು. 'ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ವೋಲ್ಕಾ ರೇಂಜ್‌ನ ಅರಣ್ಯ ಸಿಬ್ಬಂದಿ ಸಂಕೋಶ್ ನದಿಯಲ್ಲಿ ತೇಲುತ್ತಿದ್ದ ಆನೆ ತಲೆ ಪತ್ತೆ ಮಾಡಿದರು. ಅದರ ದಂತಗಳು ಕಾಣೆಯಾಗಿವೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಇದು ಅಸ್ಸೋಂ ಪ್ರದೇಶದಿಂದ ಬಂದಿದೆ ಎಂದು ತೋರುತ್ತದೆ. ನಾವು ಸಂಪೂರ್ಣ ತನಿಖೆ ಮತ್ತು ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಅಸ್ಸೋಂನಲ್ಲಿ ನಮ್ಮ ಸಹವರ್ತಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದೇವೆ' ಎಂದು ಬಕ್ಸಾ ಹುಲಿ ಸಂರಕ್ಷಿತ ಪ್ರದೇಶದ (ಪೂರ್ವ) ಉಪ ಕ್ಷೇತ್ರ ನಿರ್ದೇಶಕ ದೇಬಾಶಿಸ್ ಶರ್ಮಾ ಹೇಳಿದರು.
ಇದನ್ನೂ ಓದಿ: ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆನೆ ದಂತಗಳ ಮಾರಾಟಕ್ಕೆ ಯತ್ನ: ಮೂವರ ಬಂಧನ