ದೆಹಲಿ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ: ವಿಡಿಯೋ
🎬 Watch Now: Feature Video
ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಮಂಗಳವಾರ ರಾತ್ರಿ ಭೂಕಂಪ ಸಂಭವಿಸಿದೆ. ಅಫ್ಘಾನಿಸ್ತಾನದ ಹಿಂಡುಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ದೆಹಲಿ-ಎನ್‌ಸಿಆರ್(ರಾಷ್ಟ್ರೀಯ ರಾಜಧಾನಿ ಪ್ರದೇಶ) ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ. ಮಂಗಳವಾರ ರಾತ್ರಿ 10.20ರ ಸುಮಾರಿಗೆ ಘಟನೆ ನಡೆದಿದೆ. ಹರಿಯಾಣ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಭೂಮಿ ನಡುಗಿದೆ. ಭಯಭೀತರಾದ ಜನರು ಮನೆಯಿಂದ ಹೊರಬಂದಿದ್ದರು.
ಭೂಕಂಪದ ನಂತರ ಜಮ್ಮು ಪ್ರದೇಶದ ಕೆಲವು ಭಾಗಗಳಲ್ಲಿ ಮೊಬೈಲ್ ಸೇವೆಗಳಲ್ಲಿ ವ್ಯತ್ಯಯ ಉಂಟಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 150 ಕಿ.ಮೀಗಿಂತ ಅಧಿಕ ಆಳದಲ್ಲಿ ಕಂಪನ ಘಟಿಸಿದ್ದರಿಂದ ವಾಯುವ್ಯ ಭಾರತ ಮತ್ತು ದೆಹಲಿಯ ಜನರು ಹೆಚ್ಚು ಸಮಯದವರೆಗೆ ಕಂಪನವನ್ನು ಅನುಭವಿಸಿದ್ದಾರೆ ಎಂದು ಹಿರಿಯ ಭೂಕಂಪಶಾಸ್ತ್ರಜ್ಞರು ಹೇಳಿದ್ದಾರೆ. ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ (NCS), ಭೂಕಂಪದ ಕೇಂದ್ರ ಬಿಂದು ಅಫ್ಘಾನಿಸ್ತಾನದ ಫೈಜಾಬಾದ್‌ನಿಂದ 133 ಕಿಮೀ ದಕ್ಷಿಣ-ಆಗ್ನೇಯಕ್ಕೆ 156 ಕಿ.ಮೀ ಆಳದಲ್ಲಿದೆ. ಪಾಕಿಸ್ತಾನದ ಕೆಲವು ಭಾಗಗಳಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದ್ದು, 11 ಮಂದಿ ಸಾವನ್ನಪ್ಪಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪಾಕ್ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿಯೂ ಪ್ರಬಲ ಭೂಕಂಪ: 11 ಸಾವು, 100ಕ್ಕೂ ಮಂದಿಗೆ ಗಾಯ