ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದ ಸಾವಿರಾರು ಮಾಲಾಧಾರಿಗಳು: ಪೊಲೀಸ್ ಬಿಗಿ ಭದ್ರತೆ
🎬 Watch Now: Feature Video
Published : Dec 27, 2023, 8:19 AM IST
ಚಿಕ್ಕಮಗಳೂರು : ಕಳೆದ ಹತ್ತು ದಿನಗಳಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮಾಲೆ ಧರಿಸಿ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದ್ದ ಮಾಲಾಧಾರಿಗಳು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದತ್ತಾತ್ರೇಯನ ಘೋಷ ವಾಕ್ಯ ಮೊಳಗಿಸುತ್ತ ಪಾದುಕೆ ದರ್ಶನ ಪಡೆದರು. ದತ್ತ ಜಯಂತಿ ಹಿನ್ನೆಲೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿತ್ತು. ದತ್ತ ಪೀಠದ ತುಳಸಿ ಕಟ್ಟೆಯ ಬಳಿ ಹಿಂದೂ ಮುಖಂಡರು ಹಾಗೂ ಬಿಜೆಪಿ ನಾಯಕ ಸಿ.ಟಿ. ರವಿ ಹೋಮ ಹವನ ನಡೆಸಿ ಪೂಜೆ ನೆರವೇರಿಸಿದ್ರು. ಈ ವೇಳೆ, ವಿವಿಧ ಮಠಗಳ ಶ್ರೀಗಳು ಭಾಗವಹಿಸಿ ದತ್ತಪೀಠ ಹಿಂದೂಗಳ ಪೀಠವಾಗಬೇಕು, ಹಿಂದೂ ಮುಖಂಡರು ಹಾಗೂ ನಾಯಕರು ಒಗ್ಗಟ್ಟಿನ ಮೂಲಕ ಕೊನೆವರೆಗೂ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದ್ರು.
ಇನ್ನು ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ದರ್ಗಾದಲ್ಲಿ ದತ್ತ ಜಯಂತಿ ಆಚರಿಸುತ್ತೇವೆ ಎಂದು ಘೋಷಣೆ ಮಾಡಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿಗೆ ಜಿಲ್ಲೆ ಪ್ರವೇಶಿಸಿದಂತೆ ನಿಷೇಧ ಹೇರಲಾಗಿತ್ತು. ನಾಗೇನಹಳ್ಳಿ ದರ್ಗಾಕ್ಕೆ ತೆರಳುತ್ತಿದ್ದ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದು ಗೌಪ್ಯ ಸ್ಥಳದಲ್ಲಿ ಇರಿಸಿದ್ದರು. ಪೊಲೀಸರ ಬಿಗಿ ಭದ್ರತೆ ನಡುವೆ ಈ ಬಾರಿಯ ದತ್ತ ಜಯಂತಿ ನಡೆಯಿತು.
ಪೀಠದಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಿವಾದಿತ ಇನಾಂ ದತ್ತಾತ್ರೇಯ ಪೀಠದ ಗೋರಿಗಳ ಸುತ್ತ ಸಿಬ್ಬಂದಿ ನಿಯೋಜಿಸಿದ್ರು. ರಾಜ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 40 ಸಾವಿರಕ್ಕೂ ಹೆಚ್ಚು ದತ್ತ ಭಕ್ತರು ಪಾದುಕೆಯ ದರ್ಶನ ಪಡೆದು ಪುನೀತರಾದರು. ಮುಂದಿನ ವರ್ಷದ ವೇಳೆಗೆ ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗಬೇಕು. ಅಲ್ಲದೇ, ಮುಂಬರುವ ದತ್ತ ಜಯಂತಿಯನ್ನು ನಾಡ ಉತ್ಸವದಂತೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಮುಖಂಡರು ಘೋಷಣೆ ಕೂಗಿದರು. ಒಟ್ಟಾರೆಯಾಗಿ, ಈ ಬಾರಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಶಾಂತಿಯುತವಾಗಿ ದತ್ತ ಜಯಂತಿಗೆ ತೆರೆ ಬಿದ್ದಿದೆ.
ಇದನ್ನೂ ಓದಿ : ಕಾಫಿ ನಾಡಲ್ಲಿ ದತ್ತ ಜಯಂತಿ ಉತ್ಸವ, ಅದ್ಧೂರಿ ಶೋಭಾಯಾತ್ರೆ