ಸ್ಮಶಾನ ಇಲ್ಲದೇ ಅಂತ್ಯಕ್ರಿಯೆಗೆ ಪರದಾಟ: ಕೆಸರು ತುಂಬಿದ ಗುಂಡಿಯಲ್ಲೇ ಸಮಾಧಿ!! - ಅಂತ್ಯ ಸಂಸ್ಕಾರ
🎬 Watch Now: Feature Video
ಚಾಮರಾಜನಗರ: ಚಾಮರಾಜನಗರಕ್ಕೆ ತೀರಾ ಸಮೀಪ ಇರುವ ಹರದನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದೇ ಗುಂಡಿ ತೆಗೆದರೇ ಒಸರುತ್ತಿದ್ದ ನೀರಿನ ನಡುವೆಯೇ ಅಂತ್ಯಕ್ರಿಯೆ ನಡೆಸಿರುವ ಘಟನೆ ಇಂದು ನಡೆದಿದೆ. ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಅಧಿಕಾರಿಗಳು ಸ್ಮಶಾನ ಸ್ಥಳ ಗುರುತು ಮಾಡದ ಹಿನ್ನೆಲೆಯಲ್ಲಿ ಸ್ವಂತ ಜಮೀನು ಇಲ್ಲದವರು ಯಾರಾದರೂ ಮೃತಪಟ್ಟರೇ ಪಡಿಪಾಟಲು ಪಡಬೇಕಾದ ದುಃಸ್ಥಿತಿ ಇದೆ.
ಗ್ರಾಮದಲ್ಲಿ ಸಿದ್ದಶೆಟ್ಟಿ (76) ಎಂಬವರು ಸೋಮವಾರ ವಯೋಸಹಜವಾಗಿ ನಿಧನರಾಗಿದ್ದರು. ಮೃತರಿಗೆ ಸ್ವಂತ ಜಮೀನು ಇಲ್ಲದ ಕಾರಣ ಅಂತಿಮ ಸಂಸ್ಕಾರಕ್ಕೆ ಜಾಗವಿಲ್ಲದೇ ಗ್ರಾಮಸ್ಥರು ಪರದಾಡಿದ್ದಾರೆ. ಸರ್ಕಾರಿ ಭೂಮಿಯೊಂದರ ಕೆಸರು ತುಂಬಿದ ಜಾಗದಲ್ಲೇ ಸಮಾಧಿ ತೆಗೆದು ಅಂತ್ಯ ಸಂಸ್ಕಾರ ಮಾಡಲಾಗಿದೆ. ಸಮಾಧಿ ಗುಂಡಿ ತೆಗೆಯುವಾಗ ಹೊರ ಬರುತ್ತಿದ್ದ ನೀರನ್ನು ಹೊರಹಾಕಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಈ ಕುರಿತು, ಗ್ರಾಮದ ಗಿರೀಶ್ ಎಂಬವರು ಮಾತನಾಡಿ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಾಕಷ್ಟು ಸಲ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಸರ್ಕಾರಿ ಜಾಗವಿದ್ದರೂ ಅಧಿಕಾರಿಗಳು ಸ್ಮಶಾನ ಗುರುತು ಮಾಡಿಲ್ಲ, ಇನ್ನಾದರೂ ಸರ್ಕಾರಿ ಜಾಗವನ್ನು ಸ್ಮಶಾನ ಮಾಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸ್ಮಶಾನಕ್ಕೆ ತೆರಳಲು ರಸ್ತೆಯಿಲ್ಲದೇ ಗ್ರಾಮಸ್ಥರ ಪರದಾಟ: ಉಪ ತಹಶೀಲ್ದಾರ್ ಹೇಳಿದ್ದೇನು?