ಬಾಂಬ್ ಬೆದರಿಕೆ ಕರೆ: ಚಂಡೀಗಢ ಜಿಲ್ಲಾ ನ್ಯಾಯಾಲಯದಲ್ಲಿ ಭಾರಿ ಶೋಧ - Bomb threat
🎬 Watch Now: Feature Video
ಚಂಡೀಗಢ: ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆ ಚಂಡೀಗಢ ಪೊಲೀಸರು ಮಂಗಳವಾರ ಮಧ್ಯಾಹ್ನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಇಲ್ಲಿನ ಸೆಕ್ಟರ್ 43ರಲ್ಲಿದ್ದ ನ್ಯಾಯಾಲಯ ಸಂಕೀರ್ಣವನ್ನು ತೆರವು ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಇನ್ನೂ ಶೋಧ ಕಾರ್ಯ ನಡೆಯಿತು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು.
ಅಪರಿಚಿತ ವ್ಯಕ್ತಿಯೊಬ್ಬ ಹರಿಯಾಣ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ. ಅಲ್ಲಿಂದ ಚಂಡೀಗಢದ ಪೊಲೀಸ್ ನಿಯಂತ್ರಣ ಕೊಠಡಿಗೆ ಬೆಳಗ್ಗೆ 10.30ರ ಸುಮಾರಿಗೆ ಮಾಹಿತಿ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ತಕ್ಷಣ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಗಲಭೆ ನಿಯಂತ್ರಣ ತಂಡ, ಭಯೋತ್ಪಾದನಾ ನಿಗ್ರಹ ದಳ, ಜಿಲ್ಲಾ ಅಪರಾಧ ದಳ, ಅಪರಾಧ ವಿಭಾಗ ಮತ್ತು ಪೊಲೀಸ್ ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಲಾಯಿತು.
"ಸೆಕ್ಟರ್ 43ರಲ್ಲಿನ ನ್ಯಾಯಾಧೀಶರು, ಸಿಬ್ಬಂದಿ ಮತ್ತು ಇತರ ಉದ್ಯೋಗಿಗಳನ್ನು ನ್ಯಾಯಾಲಯದಿಂದ ಹೊರಬರುವಂತೆ ಮನವಿ ಮಾಡಲಾಯಿತು. ನಾವು ಈಗ ನಮ್ಮ ಕೊಠಡಿಯಲ್ಲಿದ್ದೇವೆ. 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವಿವಿಧ ಸಲಕರಣೆಗಳನ್ನು ಬಳಸಿ ನ್ಯಾಯಾಲಯ ಸಂಕೀರ್ಣವನ್ನು ಪರಿಶೀಲಿಸುತ್ತಿದ್ದಾರೆ" ಎಂದು ವಕೀಲ ಹರೀಶ್ ಭಾರದ್ವಾಜ್ ಹೇಳಿದ್ದಾರೆ.