ಜೆಡಿಎಸ್ನತ್ತ ಮುಖ ಮಾಡಿದ ಬಿಜೆಪಿ ಮಾಜಿ ಶಾಸಕ: ಹಾಲಹರವಿ ನೀಡಿರುವ ಸ್ಪಷ್ಟನೆ ಏನು? - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video
ಹುಬ್ಬಳ್ಳಿ : ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ನಾಯಕರಲ್ಲಿ ಅಸ್ತಿತ್ವದ ಹೋರಾಟ ಜೋರಾಗಿದೆ. ಅದರಲ್ಲೂ ಹುಬ್ಬಳ್ಳಿ ಪೂರ್ವ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ವೀರಭದ್ರಪ್ಪ ಹಾಲಹರವಿ ಅವರು ಜೆಡಿಎಸ್ನತ್ತ ಮುಖ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಈಗ ರೆಕ್ಕೆ ಪುಕ್ಕ ಬಂದಿದೆ.
ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಯ ಹಿನ್ನೆಲೆ ಹುಬ್ಬಳ್ಳಿಗೆ ಆಗಮಿಸಿದ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಮಾಜಿ ಶಾಸಕ, ಬಿಜೆಪಿ ಮುಖಂಡ ವೀರಭದ್ರಪ್ಪ ಹಾಲಹರವಿ ಭೇಟಿಯಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈಗಾಗಲೇ ಆಕಾಂಕ್ಷಿಯಾಗಿದ್ದ ವೀರಭದ್ರಪ್ಪ ಹಾಲಹರವಿ ಜೆಡಿಎಸ್ ಸೇರ್ಪಡೆ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದ್ದವು. ಈಗ ಭೇಟಿ ಮಾಡಿ ಮಾತನಾಡಿರುವುದು ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದಂತಿದೆ.
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ವೀರಭದ್ರಪ್ಪ ಹಾಲಹರವಿ, ರಾಜಕೀಯವಾಗಿ ಹಾಗೂ ಚುನಾವಣೆ ವಿಷಯವಾಗಿ ಭೇಟಿಯಾಗಿಲ್ಲ. ಹೆಚ್ ಡಿ ಕುಮಾರಸ್ವಾಮಿ ಅವರು ಹುಬ್ಬಳ್ಳಿಗೆ ಬಂದಿರುವ ಹಿನ್ನೆಲೆ ಸಹಜವಾಗಿ ಭೇಟಿಯಾಗಿದ್ದೇನೆ. ಇದರಲ್ಲಿ ರಾಜಕೀಯ ಚರ್ಚೆಗಳಿಲ್ಲ. ಸಿದ್ಧಾರೂಢರ ಮಠಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಭೇಟಿಯಾಗಿದ್ದೇನೆ ಎಂದರು.
ಬಿಜೆಪಿಯಿಂದ ಟಿಕೆಟ್ ಸಿಗಲ್ಲ ಅಂತ ನಾನು ಎಲ್ಲಿಯೂ ಹೇಳಿಲ್ಲ. ಆದರೆ, ಹುಬ್ಬಳ್ಳಿಗೆ ಕುಮಾರಸ್ವಾಮಿ ಅವರು ಬಂದಿರುವ ಹಿನ್ನೆಲೆಯಲ್ಲಿ ಉಪಹಾರಕ್ಕೆ ಆಹ್ವಾನ ನೀಡಿದ್ದರು. ಆದ್ದರಿಂದ ಭೇಟಿ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಓದಿ : ಸುನಿಲ್ ಬೋಸ್ ಎಂಎಲ್‌ಎ ಆಗಲಿ, ಡಿಕೆಶಿ ಸಿಎಂ ಆಗಲಿ ಎಂದು ಅಭಿಮಾನಿಗಳ ಹರಕೆ