ಬೆಂಗಳೂರು ಬಂದ್.. ಜಯನಗರದಲ್ಲಿ ಹೋಟೆಲ್ಗೆ ನುಗ್ಗಿ ದಾಂಧಲೆ ನಡೆಸಿದ ದುಷ್ಕರ್ಮಿಗಳು - hotels attacked by miscreants in jayanagar
🎬 Watch Now: Feature Video
Published : Sep 26, 2023, 4:12 PM IST
|Updated : Sep 26, 2023, 10:32 PM IST
ಬೆಂಗಳೂರು : ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನ ಖಂಡಿಸಿ ವಿವಿಧ ಸಂಘಟನೆಗಳು ಇಂದು ಬೆಂಗಳೂರು ಬಂದ್ಗೆ ಕರೆ ನೀಡಿದ್ದವು. ಬಂದ್ಗೆ ವಿವಿಧ ಸಂಘಟನೆಗಳು, ಬಿಜೆಪಿ, ಜೆಡಿಎಸ್, ಆಪ್ ಸೇರಿದಂತೆ ವಿವಿಧ ಪಕ್ಷಗಳು ಬೆಂಬಲ ಸೂಚಿಸಿದ್ದರು. ಬೆಂಗಳೂರು ಬಂದ್ ನಡುವೆಯೂ ತೆರೆದಿದ್ದ ಹೋಟೆಲ್ಗೆ ನುಗ್ಗಿದ ಕಿಡಿಗೇಡಿಗಳು ಸರಣಿ ದಾಂಧಲೆ ನಡೆಸಿರುವ ಘಟನೆ ಜಯನಗರದಲ್ಲಿ ನಡೆದಿದೆ.
ಬಂದ್ ಮಾಡಿಲ್ಲ ಎಂದು ಜಯನಗರದ ಕೆಲ ಹೋಟೆಲ್‌ಗಳಿಗೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಪೀಠೋಪಕರಣಗಳನ್ನು ಎಸೆದು, ಹೋಟೆಲ್ ಗಾಜುಗಳನ್ನು ಜಖಂಗೊಳಿಸಿದ್ದಾರೆ. ಈ ಕಿಡಿಗೇಡಿಗಳ ಕೃತ್ಯ ಹೋಟೆಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಡಿಯೋದಲ್ಲಿ ಆರೋಪಿಗಳು ದಾಂಧಲೆ ಮಾಡುತ್ತಿದ್ದು, ಈ ವೇಳೆ ಹೋಟೆಲ್ನಲ್ಲಿದ್ದ ಸಾರ್ವಜನಿಕರು ಹೊರಹೋಗುತ್ತಿರುವುದನ್ನು ಕಾಣಬಹುದು. ಇನ್ನೊಂದು ದೃಶ್ಯದಲ್ಲಿ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಗಾಜು ಒಡೆದು ಹಾಕಿದ್ದಾರೆ. ಕಿಡಿಗೇಡಿಗಳ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃತ್ಯವೆಸಗಿದ್ದ ಇಬ್ಬರು ಕಿಡಿಗೇಡಿಗಳನ್ನ ಗುರುತಿಸಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಬಿಜೆಪಿ ಶಾಸಕ ರಾಮಮೂರ್ತಿ ವಶಕ್ಕೆ ಪಡೆದು ಬಿಡುಗಡೆ : ನಿಷೇಧಾಜ್ಞೆ ನಡುವೆ ಗುಂಪು ಸೇರಿಸಿ ಪ್ರತಿಭಟನೆ ನಡೆಸುತ್ತಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮಮೂರ್ತಿ ಅವರನ್ನು ಮುಂಜಾಗ್ರತವಾಗಿ ಪೊಲೀಸರು ವಶಕ್ಕೆ ಪಡೆದರು. ಸತತ ಐದು ಗಂಟೆಗಳ ಕಾಲ ಠಾಣೆಯಲ್ಲಿ ಇರಿಸಲಾಗಿತ್ತು. ಅನಗತ್ಯವಾಗಿ ಶಾಸಕರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಆರೋಪಿಸಿ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಹಾಗೂ ವಿಧಾನಪರಿಷತ್ ಸದಸ್ಯ ರವಿಕುಮಾರ್ ನೇತೃತ್ವದಲ್ಲಿ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಯಿತು. ಕೆಲ ಹೊತ್ತಿನ ಬಳಿಕ ಎಸಿಪಿ ನಾರಾಯಣ ಸ್ವಾಮಿ ಅವರು, 144 ಸೆಕ್ಷನ್ ಜಾರಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಶಾಸಕರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಬಳಿಕ ಅವರನ್ನು ಬಿಟ್ಟು ಕಳುಹಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಾಮಮೂರ್ತಿ, ಇಂದು ಕಾವೇರಿ ನೀರಿಗಾಗಿ ಶಾಂತಿಯುತವಾಗಿ ಪ್ರತಿಭಟನೆ ಮಾಡಲಾಗುತ್ತಿತ್ತು. ಯಾವುದೇ ಅಹಿತಕರ ಘಟನೆಗಳು ನಡೆದಿರಲಿಲ್ಲ. ಈ ವೇಳೆ ಪೊಲೀಸರು ನಮ್ಮನ್ನು ವಶಕ್ಕೆ ಪಡೆದುಕೊಂಡರು. ಸುಮಾರು ಐದು ಗಂಟೆಗಳ ಕಾಲ ಠಾಣೆಯಲ್ಲಿ ಇರಿಸಿಕೊಂಡಿದ್ದರು. ಕಾವೇರಿ ನೀರಿಗಾಗಿ ಬಿಜೆಪಿ ನಿರಂತರವಾಗಿ ಹೋರಾಟ ನಡೆಸುತ್ತಿದೆ. ನಮ್ಮ ಹೋರಾಟವನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ನಮ್ಮ ಈ ರೀತಿ ಮಾಡುತ್ತಿದೆ ಎಂದು ಆರೋಪಿಸಿದರು.
ಬೆಂಗಳೂರು ಬಂದ್ ಸಂಬಂಧ ಯಾರಾದರೂ ಒತ್ತಾಯ ಪೂರ್ವಕವಾಗಿ ಬಂದ್ ಮಾಡಲು ಯತ್ನಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಹೇಳಿದ್ದರು. ಬಂದ್ ಹಿನ್ನೆಲೆ ಸೋಮವಾರ ರಾತ್ರಿ 12 ಗಂಟೆಯಿಂದ ಮಂಗಳವಾರ ರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಹೇರಲಾಗಿದೆ. ಇಂದು ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಬಂದ್ ಆಚರಿಸಲಾಗುತ್ತಿದೆ.
ಇದನ್ನೂ ಓದಿ : ಪ್ರತಿಭಟನೆಗೆ ಮುಂದಾದ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯರ್ತರನ್ನು ವಶಕ್ಕೆ ಪಡೆದ ಪೊಲೀಸರು