ದಸರಾ ಗಜಪಡೆಗೆ ಮಹಾಮಜ್ಜನ.. ಈಟಿವಿ ಭಾರತ ಪ್ರತ್ಯಕ್ಷ ವರದಿ
🎬 Watch Now: Feature Video
Published : Sep 14, 2023, 5:26 PM IST
ಮೈಸೂರು : ಜಂಬೂಸವಾರಿಯಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆಗೆ ಪ್ರತಿನಿತ್ಯ ತಾಲೀಮಿನ ಜೊತೆಗೆ ಮಹಾಮಜ್ಜನವನ್ನು ಮಾಡಿಸುವ ಮೂಲಕ ಗಜಪಡೆಯನ್ನ ಜಂಬೂಸವಾರಿಗೆ ಅಣಿಗೊಳಿಸುತ್ತಿದ್ದಾರೆ. ಅದರ ವಿಡಿಯೋ ಇಲ್ಲಿದೆ.
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅಭಿಮನ್ಯು ನೇತೃತ್ವದ ಗಜಪಡೆ ಅರಮನೆಯಲ್ಲಿ ಬೀಡುಬಿಟ್ಟಿದೆ. ಈ ಗಜಪಡೆಗೆ ಪ್ರತಿನಿತ್ಯ ತಾಲೀಮು, ಜೊತೆಗೆ ವಿಶೇಷ ಆಹಾರ ಸಹ ನೀಡಲಾಗುತ್ತಿದೆ. ಜೊತೆಗೆ ಅರಮನೆಯಿಂದ ಬನ್ನಿ ಮಂಟಪದವರೆಗೆ ಪ್ರತಿನಿತ್ಯ ಎರಡು ಬಾರಿ ತಾಲೀಮು ನಡೆಸಲಾಗುತ್ತದೆ. ಈ ವೇಳೆ ಗಜಪಡೆ ಆಯಾಸ ನಿವಾರಿಸಿಕೊಳ್ಳಲು ಮೈಮೇಲೆ ಮಣ್ಣನ್ನು ಹಾಕಿಕೊಂಡು ಗಲೀಜು ಮಾಡಿಕೊಂಡಿರುತ್ತವೆ. ಅದರಿಂದ ಗಜಪಡೆಗಳಿಗೆ ಮಜ್ಜನ ಮಾಡಿಸುವ ಮೂಲಕ, ಅವುಗಳ ಆಯಾಸ ಮತ್ತು ದೇಹದ ಕೊಳೆಯನ್ನು ತೊಳೆಯುವ ಕೆಲಸವನ್ನು ಗಜಪಡೆಯ ಮಾವುತರು, ಕಾವಾಡಿಗರು ಹಾಗೂ ಸಹಾಯಕರು ಮಾಡುತ್ತಾರೆ.
ಗಜಪಡೆಯನ್ನ ಕೋಡಿ ಸೋಮೇಶ್ವರ ದೇವಾಲಯದ ಆವರಣದ ಪಕ್ಕದಲ್ಲಿರುವ ಕೊಳದಲ್ಲಿ ಸ್ನಾನ ಮಾಡಿಸುತ್ತಾರೆ. ಆ ಸಂದರ್ಭದಲ್ಲಿ ಗಜಪಡೆಯ ಬೆನ್ನು, ದಂತ, ಸೊಂಡಿಲು, ಕಾಲಿನ ಭಾಗವನ್ನು ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಾರೆ. ಆ ಮೂಲಕ ಜಂಬೂಸವಾರಿಗೆ ಗಜಪಡೆಯನ್ನ ಸಿದ್ಧಗೊಳಿಸುವ ಕೆಲಸ ನಡೆಯುತ್ತಿದೆ.
ಅಮಾವಾಸ್ಯೆ ಹಿನ್ನೆಲೆಯಲ್ಲಿ ತಾಲೀಮು ರದ್ದು : ಇಂದು ಅಮಾವಾಸ್ಯೆ ಹಿನ್ನೆಲೆ ಗಜಪಡೆಯ ತಾಲೀಮನ್ನು ರದ್ದು ಮಾಡಲಾಗಿದೆ. ಅಮಾವಾಸ್ಯೆ ಹಿನ್ನೆಲೆ ಎಲ್ಲಾ ಆನೆಗಳಿಗೆ ಮಜ್ಜನ ಮಾಡಿಸಲಾಗಿದೆ. ಅದರಲ್ಲೂ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಐದಕ್ಕೂ ಹೆಚ್ಚು ಜನ ಮಜ್ಜನ ಮಾಡಿಸುತ್ತಿರುವ ದೃಶ್ಯ ವಿಶೇಷವಾಗಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ..