ಟಿಟಿಇ ಗೂಂಡಾಗಿರಿ: ಟಿಕೆಟ್ ಇಲ್ಲದೇ ಪ್ರಯಾಣಿಸಿದ್ದಕ್ಕೆ ಯುವತಿಗೆ ನಿಲ್ದಾಣದಲ್ಲೇ ಕಪಾಳ ಮೋಕ್ಷ
🎬 Watch Now: Feature Video
ಬರೇಲಿ (ಉತ್ತರ ಪ್ರದೇಶ): ಇಲ್ಲಿನ ರೈಲು ನಿಲ್ದಾಣದಲ್ಲಿ ಮಹಿಳಾ ಟಿಟಿಇ ಗೂಂಡಾಗಿರಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಹುಡುಗಿಯೊಬ್ಬಳಿಗೆ ಟಿಟಿಇ ಥಳಿಸುತ್ತಿರುವುದು ಕಂಡು ಬಂದಿದೆ. ಯುವತಿಯನ್ನು ಟಿಟಿಇ ಕಾಲರ್ ಹಿಡಿದು ಎಳೆಯುವುದನ್ನು ಸಹ ಕಾಣಬಹುದು. ವಿಡಿಯೋ ವೈರಲ್ ಆದ ನಂತರ ಡಿಆರ್‌ಎಂ ರೇಖಾ ಯಾದವ್ ಮೂವರು ಮಹಿಳಾ ಟಿಟಿಇಗಳನ್ನು ಕರ್ತವ್ಯದಿಂದ ವಜಾಗೊಳಿಸಿದ್ದಾರೆ.
ಮೂವರು ಮಹಿಳಾ ಟಿಟಿಇಗಳ ತಂಡ ಭಾನುವಾರ ಈಶಾನ್ಯ ರೈಲ್ವೆಯ ಲಾಲ್ ಕುವಾನ್‌ನಿಂದ ಚಲಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲನ್ನು ಪರಿಶೀಲಿಸಿದ್ದರು. ಈ ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಯುವತಿ ಸಿಕ್ಕಿಬಿದ್ದಿದ್ದಾರೆ. ಬರೇಲಿ ರೈಲ್ವೆ ಜಂಕ್ಷನ್ ತಲುಪುತ್ತಿದ್ದಂತೆ ಮೂವರು ಟಿಟಿಇಗಳು ಯುವತಿಯನ್ನು ಕೆಳಗಿಳಿಸಿದ್ದಾರೆ. ಅಲ್ಲದೇ ಪ್ಲಾಟ್‌ಫಾರ್ಮ್ ಸಂಖ್ಯೆ 5ರಲ್ಲಿ ಟಿಟಿಇ ಯುವತಿಯ ಕೊರಳಪಟ್ಟಿ ಹಿಡಿದು ಬಲವಂತವಾಗಿ ಕಚೇರಿಯತ್ತ ಕರೆದೊಯ್ಯಲು ಯತ್ನಿಸಿದ್ದಾರೆ. ಯುವತಿ ವಿರೋಧಿಸಿದಾಗ ಆಕೆಗೆ ಥಳಿಸಿದ್ದಾರೆ. ಅಲ್ಲದೇ ಯುವತಿಗೆ ನಿರಂತರವಾಗಿ ಕಪಾಳಮೋಕ್ಷ ಮಾಡುತ್ತಿದ್ದಾರೆ. ಈ ಘಟನೆಯನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈಶಾನ್ಯ ರೈಲ್ವೆ ವಿಭಾಗದ ಡಿಆರ್‌ಎಂ ರೇಖಾ ಯಾದವ್ ಮಾತನಾಡಿ, ಯಾವುದೇ ಪ್ರಯಾಣಿಕರೊಂದಿಗೆ ರೈಲ್ವೆ ಉದ್ಯೋಗಿಗಳು ಈ ರೀತಿಯ ವರ್ತನೆ ಮಾಡುವಂತಿಲ್ಲ. ಕಾನೂನು ಕ್ರಮ ಕೈಗೊಳ್ಳಬೇಕೇ ಹೊರತು ಹಲ್ಲೆ ಮಾಡಬಾರದು. ಬಾಲಕಿಯ ಮೇಲೆ ಹಲ್ಲೆ ನಡೆಸಿರುವುದು ಅನ್ಯಾಯ. ಮೂವರು ಮಹಿಳಾ ಟಿಟಿಇಗಳನ್ನು ಕೂಡಲೇ ಕರ್ತವ್ಯದಿಂದ ವಜಾಗೊಳಿಸುವಂತೆ ನೋಟಿಸ್ ಕಳುಹಿಸಲಾಗಿದ್ದು, ಟಿಟಿಇಗಳಿಗೆ ಘಟನೆ ಬಗ್ಗೆ ಉತ್ತರ ಕೇಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಒಂದೇ ಸ್ಕೂಟಿಯಿಂದ 643 ಬಾರಿ ಸಂಚಾರ ನಿಯಮ ಉಲ್ಲಂಘನೆ: ಬಿತ್ತು 3.22 ಲಕ್ಷ ರೂ. ದಂಡ