ಹದಗೆಟ್ಟ ರಸ್ತೆಗೆ ಡಾಂಬರ್: ಗೋಪಾಲಸ್ವಾಮಿ ಬೆಟ್ಟಕ್ಕೆ 3 ದಿನ ನೋ ಎಂಟ್ರಿ! - ಗೋಪಾಲಸ್ವಾಮಿ ಬೆಟ್ಟ
🎬 Watch Now: Feature Video
Published : Dec 14, 2023, 2:39 PM IST
ಗುಂಡ್ಲುಪೇಟೆ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ರಸ್ತೆ ಡಾಂಬರೀಕರಣ ಉದ್ದೇಶದಿಂದ ಡಿ.18 ರಿಂದ 20 ರವರೆಗೆ ಮೂರು ದಿನಗಳ ಕಾಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಿಂದ ದೇವಸ್ಥಾನಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿತ್ತು. ಈ ಬಗ್ಗೆ ಪ್ರವಾಸಿಗರು ಹಾಗೂ ಪ್ರಯಾಣಿಕರಿಂದ ವ್ಯಾಪಕವಾಗಿ ದೂರುಗಳು ಸಹ ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಇದೀಗ ರಸ್ತೆ ದುರಸ್ತಿಗೊಳಿಸಿ 11.20 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲು ಮುಂದಾಗಿದೆ.
ಗೋಪಾಲ ಬೆಟ್ಟದ ತಪ್ಪಲಿನಿಂದ ನಿತ್ಯ ಕೆಎಸ್ಆರ್ಟಿಸಿಯಿಂದ 5 ಬಸ್ಗಳನ್ನು ಬಿಡಲಾಗಿತ್ತು. ವಾರಾಂತ್ಯ ಹಾಗೂ ವಿಶೇಷ ದಿನಗಳಲ್ಲಿ 20ಕ್ಕೂ ಅಧಿಕ ಬಸ್ಗಳು ಸಂಚರಿಸುತ್ತಿದ್ದವು. ಜೊತೆಗೆ ಅರಣ್ಯ ಇಲಾಖೆಯಿಂದ 4-5 ಐದು ಜೀಪ್ಗಳನ್ನು ಸಹ ಬಿಡಲಾಗಿತ್ತು. ಇದೀಗ ರಸ್ತೆ ಡಾಂಬರೀಕರಣ ಮಾಡುವ ಉದ್ದೇಶದಿಂದ ಎಲ್ಲ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ಭಕ್ತಾದಿಗಳು ಹಾಗೂ ಪ್ರವಾಸಿಗರು ಡಿ.18 ರಿಂದ 20 ರವರೆಗೆ ಮೂರು ದಿನಗಳ ಕಾಲ ಬೆಟ್ಟಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆ ಸಹಕಾರ ನೀಡಬೇಕು ಎಂದು ತಹಶಿಲ್ದಾರ್ ಟಿ.ರಮೇಶ್ ಬಾಬು ತಿಳಿಸಿದ್ದಾರೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟವು ಸದಾ ಹಿಮದಿಂದ ಆವೃತವಾಗಿರುವ ಬೆಟ್ಟವಾಗಿದ್ದು, ವೀಕೆಂಡ್ನ ಹಾಟ್ ಸ್ಪಾಟ್ ಆಗಿದೆ. ಹಸಿರು, ಹಿಮ ಕಾಣಲು ಬೆಂಗಳೂರು, ಕೇರಳ, ತಮಿಳುನಾಡು ಭಾಗಗಳಿಂದ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ಕೊಡುತ್ತಿರುತ್ತಾರೆ.
ಇದನ್ನೂ ಓದಿ: ಸಿದ್ದಾರೂಢ ಮಠದಲ್ಲಿ ಅದ್ಧೂರಿಯಾಗಿ ನೆರವೇರಿದ ಲಕ್ಷದೀಪೋತ್ಸವ