ಕೋಲಾರದಲ್ಲಿ ಉದ್ಯಮಿ ಕಿಡ್ನಾಪ್ ದೂರು, ಐದು ಕೋಟಿಗೆ ಬೇಡಿಕೆ ಆರೋಪ: ಪೊಲೀಸರಿಂದ ತನಿಖೆ - ಕೋಲಾರದಲ್ಲಿ ಉದ್ಯಮಿ ಕಿಡ್ನಾಪ್
🎬 Watch Now: Feature Video
ಕೋಲಾರ : ಉದ್ಯಮಿಯೊಬ್ಬರನ್ನು ಕಿಡ್ನಾಪ್ ಮಾಡಿ ಐದು ಕೋಟಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೋಲಾರದ ಮಾಲೂರಿನಲ್ಲಿ ಕೇಳಿಬಂದಿದೆ. ಕೋಲಾರ ಜಿಲ್ಲೆ ಮಾಲೂರು ಪಟ್ಟಣದ ಮಾರುತಿ ಬಡಾವಣೆಯಲ್ಲಿ ಈ ಘಟನೆ ಜರುಗಿದ್ದು, ಬಡಾವಣೆಯ ಬಾಬು ಎಂಬಾತ ಕಿಡ್ನಾಪ್ ಆಗಿದ್ದಾರೆ ಎಂದು ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಕಿಡ್ನಾಪ್ ಆಗಿರುವ ಬಾಬು ಅವರ ಪತ್ನಿ ವರಲಕ್ಷ್ಮೀ ಅವರು ಮಾತನಾಡಿದ್ದು, ’’ನಿನ್ನೆ 2 ಗಂಟೆಗೆ ಪತಿ ಊಟಕ್ಕೆ ಬರಲಿಲ್ಲ. ಫೋನ್ ಮಾಡಿದ್ರೆ ಸ್ವಿಚ್ಡ್ ಆಫ್ ಎಂದು ಬರುತ್ತಿತ್ತು. ನಂತರ ನಾವು ಊಟ ಮಾಡಿದ್ವಿ. ಆಗ ನಮ್ಮ ಮಗ ಮಂಜುನಾಥ್ಗೆ ಯಾರೋ ಫೋನ್ ಮಾಡಿ, ನಿಮ್ಮ ಅಪ್ಪ ಬೇಕು ಅಂದ್ರೆ ದುಡ್ಡು ರೆಡಿ ಮಾಡ್ಕೋ ಎಂದು ಹೇಳಿದ. ಆಗ ನಾನು ಮಾತನಾಡಿದೆ. ನನಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ. ನಂತರ ನಮ್ಮ ಪತಿಗೆ ಫೋನ್ ಕೊಡುವಂತೆ ಹೇಳಿದೆ. ಅವರಿಗೆ ಫೋನ್ ಕೊಟ್ಟ ಬಳಿಕ, ಏನಾಯಿತು? ಎಂದು ಕೇಳಿದೆ. ಅದಕ್ಕವರು ಯಾರು ಅಂತ ಗೊತ್ತಿಲ್ಲ. ಯಾರೋ ಒಬ್ಬರು ಸಾರ್ ಬಂದ್ರು. ಏನೋ ಕೇಳ್ತಾ ಇದ್ರು. ನಂತರ ಹಂಗೆ ಮುಸುಕು ಹಾಕಿ ಕರೆದುಕೊಂಡು ಹೋಗ್ಬಿಟ್ರು. ಎಲ್ಲಿದ್ದೇನೆ ಎಂಬುದು ಗೊತ್ತಿಲ್ಲ ಎಂದರು. ನಂತರ ಆತ ಐದು ಕೋಟಿ ಹಣಕ್ಕೆ ಬೇಡಿಕೆ ಇಟ್ಟ. ಅದಕ್ಕೆ ಪ್ರತಿಕ್ರಿಯಿಸಿದ ನಾನು, ಅಲ್ಲಪ್ಪ ನಾನೂ ಕೂಡ ಪೇಷಂಟ್, ನಮ್ಮ ಪತಿಗೂ ಹುಷಾರಿಲ್ಲ. ಮಗನಿಗೂ ಆರೋಗ್ಯ ಸರಿಯಿಲ್ಲ. 5 ಕೋಟಿ ಎಂದರೆ ಎಲ್ಲಿಂದ ಹಣ ತರುವುದು ಅಂದೆ. ಅದಕ್ಕವನು ಎಲ್ಲಾದ್ರೂ ಮೋರಿಯಲ್ಲಿ ಬಿದ್ದು ಸಾಯಿರಿ ಅಂದು ಪೋನ್ ಕಟ್ ಮಾಡಿ ಸ್ವಿಚ್ಡ್ ಆಫ್ ಮಾಡಿದ ಎಂದು‘‘ ಘಟನೆ ಬಗ್ಗೆ ಮಾಹಿತಿ ಕೊಟ್ಟರು.
ಇದರಿಂದ ಆತಂಕಗೊಂಡ ಮನೆಯವರು ಇಂದು ಬೆಳಗ್ಗೆ ಮಾಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಕಿಡ್ನಾಪರ್ಸ್ನ ಜಾಡು ಹಿಡಿಯಲು ಪೊಲೀಸರಿಂದ ಮೂರು ತಂಡಗಳನ್ನ ರಚಿಸಿದ್ದು, ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಕೊಟ್ಟ ಸಾಲ ವಾಪಸ್ ಕೇಳಿದ ತಾಯಿ-ಮಗನನ್ನು ಸಿನಿಮಾ ಶೈಲಿಯಲ್ಲಿ ಕಿಡ್ನಾಪ್ ಮಾಡಿಸಿದ ಮಹಿಳೆ!