ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ದಂಧೆಕೋರ ಅರೆಸ್ಟ್
🎬 Watch Now: Feature Video
ಬೆಂಗಳೂರು: ರಾಜಧಾನಿಯಲ್ಲಿ ಅಕ್ರಮವಾಗಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ನಾಗಪುರ ಮೂಲದ ರೋಷನ್ ದಯಾರಾಮ್ ಎಂಬಾತನನ್ನ ಬಂಧಿಸಿ 10 ನಾಡಪಿಸ್ತೂಲ್ 20 ಜೀವಂತ ಗುಂಡುಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಮಾಹಿತಿ ನೀಡಿದ್ದಾರೆ.
ಆರೋಪಿ ಮಹಾರಾಷ್ಟ್ರದಿಂದ ನಗರಕ್ಕೆ ಪಿಸ್ತೂಲ್ ಮಾರಾಟಕ್ಕೆ ಯತ್ನಿಸಿರುವ ಸಂಬಂಧ ಕಾರ್ಯಾಚರಣೆ ಕೈಗೊಂಡಿದ್ದ ಶೇಷಾದ್ರಿಪುರ ಪೊಲೀಸರು ಬಂಧಿಸಿ ನಾಲ್ಕು ನಾಡ ಪಿಸ್ತೂಲ್ ಹಾಗೂ 12 ಜೀವಂತ ಗುಂಡುಗಳನ್ನ ವಶಪಡಿಸಿಕೊಂಡಿದ್ದರು. ನಂತರ ಪ್ರಕರಣವನ್ನ ಸಿಸಿಬಿಗೆ ವರ್ಗಾಯಿಸಿದ್ದರು. ಮಹಾರಾಷ್ಟ್ರದಲ್ಲಿ ಹಲವು ವರ್ಷಗಳಿಂದ ಪಿಸ್ತೂಲ್ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದ ಆರೋಪಿ ವಿರುದ್ಧ ನಾಗಪುರದ ವಾಡಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆಯತ್ನ, ಎರಡು ಕಳ್ಳತನ ಪ್ರಕರಣ ದಾಖಲಾಗಿವೆ.
ಕೆಲ ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ಆರೋಪಿ ಪಿಸ್ತೂಲ್ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದ. ಒಂದು ಪಿಸ್ತೂಲ್ 35 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಬೆಂಗಳೂರು ಮಾತ್ರವಲ್ಲದೇ ದೇಶದ ಬೇರೆ ಬೇರೆ ನಗರಗಳಲ್ಲಿ ಮಾರಾಟ ಜಾಲ ವಿಸ್ತರಿಸಿಕೊಂಡಿದ್ದ. ಮಹಾರಾಷ್ಟ್ರದಲ್ಲಿ ಸಂಗ್ರಹಿಸಿದ್ದ 6 ನಾಡಪಿಸ್ತೂಲ್ ಹಾಗೂ 8 ಜೀವಂತ ಗುಂಡುಗಳನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ. ಈ ಹಿಂದೆ ನಗರದಲ್ಲಿ ಪಿಸ್ತೂಲ್ ಮಾರಾಟ ಮಾಡಿರುವುದು ತಿಳಿದು ಬಂದಿದೆ. ಯಾರಿಂದ ಪಿಸ್ತೂಲ್ ಖರೀದಿಸಿ ಯಾರಿಗೆ ಮಾರಾಟ ಮಾಡುತ್ತಿದ್ದ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿರುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ತಿಳಿಸಿದ್ದಾರೆ.
ಓದಿ : ರಾಜ್ಯದಲ್ಲಿ ಪ್ರತ್ಯೇಕ ಅಪಘಾತ: ನಾಲ್ವರು ಸಾವು.. ಬೆಂಗಳೂರಲ್ಲಿ ಕಾರು ಜಖಂಗೊಳಿಸಿದ ರೌಡಿಶೀಟರ್