ಶಾರ್ಟ್ ಸರ್ಕ್ಯೂಟ್ನಿಂದ ಹೊತ್ತಿ ಉರಿದ ಖಾಸಗಿ ಬಸ್: ಅದೃಷ್ಟವಶಾತ್ ಪ್ರಯಾಣಿಕರು ಪಾರು
🎬 Watch Now: Feature Video
ಮಂಡ್ಯ : ಶಾರ್ಟ್ ಸರ್ಕ್ಯೂಟ್ನಿಂದಾಗಿ ಖಾಸಗಿ ಬಸ್ಸೊಂದು ನಡು ರಸ್ತೆಯಲ್ಲೇ ಹೊತ್ತಿ ಉರಿದಿರುವ ಘಟನೆ ಇಂದು ಮಧ್ಯಾಹ್ನ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿಯ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಖಾಸಗಿ ಬಸ್ ಮದುವೆ ಹಿನ್ನೆಲೆ ಬೆಂಗಳೂನಿಂದ ಮೈಸೂರಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬಸ್ನಲ್ಲಿ ಹೊಗೆ ಬರುತ್ತಿರುವುದನ್ನು ಗಮನಿಸಿದ ಪ್ರಯಾಣಿಕರು ಚಾಲಕನಿಗೆ ಬಸ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಈ ವೇಳೆ, ಚಾಲಕನು ಬಸ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ಪ್ರಯಾಣಿಕರೆಲ್ಲರೂ ಬಸ್ನಿಂದ ಇಳಿದಿದ್ದಾರೆ. ಈ ವೇಳೆ, ಬಸ್ಗೆ ಮತ್ತಷ್ಟು ಬೆಂಕಿ ಆವರಿಸಿದ್ದು, ಸುಟ್ಟು ಕರಕಲಾಗಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಬಸ್ನಲ್ಲಿ ಮೂವತ್ತಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ರಾಯಚೂರು ಲ್ಯಾಬೋರೇಟರಿ ಘಟಕದಲ್ಲಿ ಬೆಂಕಿ ಅವಘಡ; ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿ