ಮಳೆಯಿಲ್ಲದೇ ಬತ್ತಿದ ಕೆರೆಗೆ ಕೊಳವೆ ಬಾವಿಯಿಂದ ನೀರು ಹರಿಸಿ ಪ್ರಾಣಿಪಕ್ಷಿಗಳ ನೀರಿನ ದಾಹ ತೀರಿಸುತ್ತಿರುವ ರೈತ - ಹವಾಮಾನ ಇಲಾಖೆ
🎬 Watch Now: Feature Video
ಹಾವೇರಿ: ಮಳೆಗಾಲ ಆರಂಭವಾಗಿ ಎರಡು ವಾರ ಕಳೆದರೂ ರಾಜ್ಯದಲ್ಲಿ ಮಳೆ ಮಾತ್ರ ಮುನಿಸಿಕೊಂಡಿದೆ. ಬೆಳೆಗಳಿಗೆ ಇರಲಿ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿನ ಅಭಾವ ಕಾಣಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ರೈತನೊಬ್ಬ ತನ್ನ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ಕೆರೆಗೆ ನೀರು ಹರಿಸುವ ಮೂಲಕ ಪ್ರಾಣಿಪಕ್ಷಿಗಳ ದಾಹ ತೀರಿಸುವ ಮೂಲಕ ಪ್ರಾಣಿ ಪ್ರೇಮ ಮೆರೆದಿದ್ದಾರೆ.
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದ ರವಿ ತಿರುಮಲೆ ಎಂಬ ರೈತ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಮುಂಜಾನೆ ಕೊಳವೆ ಬಾವಿಯಿಂದ ನೀರು ಬಿಡಲು ಆರಂಭಿಸುವ ರೈತ ರಾತ್ರಿವರೆಗೆ ಕೆರೆಗೆ ನೀರು ಹರಿಸುತ್ತಾರೆ. ರಣ ಬಿಸಿಲಿನಿಂದ ಬತ್ತಿ ಹೋಗಿದ್ದ ಕೆರೆ ಇದೀಗ ಮತ್ತೆ ನೀರಿನಿಂದ ತುಂಬಿಕೊಳ್ಳಲಾರಂಭಿಸಿದೆ. ಅಲ್ಲದೇ ರೈತರು, ಕುರಿಗಾಯಿಗಳು ರಾಸುಗಳಿಗೆ ಕುರಿಗಳಿಗೆ ನೀರು ಕುಡಿಸಲು ಕೆರೆಗೆ ಆಗಮಿಸುತ್ತಿದ್ದಾರೆ. ಗುಬ್ಬಿ ಸೇರಿದಂತೆ ಪಕ್ಷಿಗಳು ಕೆರೆಯ ನೀರಿನಲ್ಲಿ ದಾಹ ತೀರಿಸಿಕೊಳ್ಳುತ್ತಿವೆ.
ಸ್ವಂತ ಜಮೀನಿನಲ್ಲಿದ್ದ ಬೋರ್ವೆಲ್ ನಿಂದ ಬತ್ತಿದ ಕೆರೆಗೆ ನೀರು ಹರಿಸುತ್ತಿರುವ ರೈತನ ಕಾರ್ಯಕ್ಕೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತನ್ನ ಬೆಳೆಗಿಂತ ಪ್ರಾಣಿಪಕ್ಷಿಗಳ ದಾಹ ತೀರಿಸುವದು ಮುಖ್ಯ ಎನ್ನುವ ರೈತನ ಈ ಕಾರ್ಯ ಮಾದರಿಯಾಗಿದೆ. ಈ ಕುರಿತಂತೆ ಮಾತನಾಡಿದ ರೈತ ನಮಗೆ ಮಾತು ಬರುತ್ತೆ ಎಲ್ಲಿಯಾದರು ನೀರು ಕುಡಿದು ಬದುಕುತ್ತೇವೆ. ಆದರೆ, ಪ್ರಾಣಿಪಕ್ಷಿಗಳು ದಾಹ ಹೇಗೆ ತೀರಿಸಿಕೊಳ್ಳಬೇಕು. ಅದಕ್ಕಾಗಿ ನನ್ನ ಕೈಯಿಂದ ಆದ ಸಹಾಯ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ಸ್ವಂತ ಬಾವಿಯಿಂದ ನೀರು ಸರಬರಾಜು ಮಾಡಿ ಜನರ ದಾಹ ತೀರಿಸುತ್ತಿರುವ ಆಧುನಿಕ ಭಗೀರಥ...!